ರಾಜ್ಯ

ಮಹಾರಾಷ್ಟ್ರ: ಬಜಾಜ್ ಆಟೋ ಘಟಕದ 200 ಮಂದಿಗೆ ಕೊರೋನಾ ಸೋಂಕು!

Srinivasamurthy VN

ಮುಂಬೈ: ಬಜಾಜ್ ಆಟೋ ಘಟಕದ ಸುಮಾರು 200 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂಬ ಸುದ್ದಿ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ಔರಂಗಾಬಾದ್‌ನ ವಾಹುಜ್‌ನಲ್ಲಿರುವ ಬಜಾಜ್ ಆಟೋ ಘಟಕದಲ್ಲಿನ 200 ಮಂದಿ ನೌಕರರರಿಗೆ ಕೋವಿಡ್-19 ಸೋಂಕು ತಗಲಿದೆ. ಈ ಬಗ್ಗೆ ಸ್ವತಃ ಬಜಾಜ್ ಆಟೊ ಕಂಪನಿ ಶುಕ್ರವಾರ ಮಾಹಿತಿ ನೀಡಿದ್ದು,  ಈ ಘಟಕದಲ್ಲಿ 8,100ಕ್ಕೂ ಅಧಿಕ ಸಿಬ್ಬಂದಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದು,  ಸೋಂಕಿನಿಂದಾಗಿ ಈಗಾಗಲೇ ಇಬ್ಬರು ಮೃತಪಟ್ಟಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಜಾಜ್ ಆಟೋ ಸಂಸ್ಥೆ ಸಿಎಚ್‌ಆರ್‌ಒ ರವಿ ಕಿರಣ್ ರಾಮಸ್ವಾಮಿ ಅವರು,  ಔರಂಗಾಬಾದ್ ಘಟಕದಲ್ಲಿಇದೀಗ 200 ಸೋಂಕು ಪ್ರಕರಣ ಪತ್ತೆಯಾಗಿದೆ. ಇದು ನಮ್ಮಲ್ಲಿರುವ ಸಿಬ್ಬಂದಿಯ ಶೇ.2ಕ್ಕಿಂತಲೂ ಕಡಿಮೆ. ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ಹಿನ್ನೆಲೆ ಇರುವ ಇಬ್ಬರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. 

ಏಪ್ರಿಲ್ 24ರವರೆಗೂ ಘಟಕದಲ್ಲಿ ಯಾವುದೇ ರೀತಿಯ ಸೋಂಕು ಪ್ರಕರಣ ಪತ್ತೆಯಾಗಿರಲಿಲ್ಲ. ಜೂನ್ 6ರಂದು ಮೊದಲ ಪ್ರಕರಣ ಪತ್ತೆಯಾಗಿತ್ತು. ಕೂಡಲೇ ನಾವು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡೆವು. ಸೋಂಕಿತ ವ್ಯಕ್ತಿಯ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿತ್ತು. ಇಡೀ ಘಟಕಕ್ಕೆ ಸ್ಯಾನಿಟೈಜೇಷನ್ ಮಾಡಲಾಯಿತು. ಇಲ್ಲಿನ ಪ್ರತೀಯೊಂದು ಘಟನೆಗಳನ್ನೂ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು  ರವಿ ಕಿರಣ್ ರಾಮಸ್ವಾಮಿ ಹೇಳಿದ್ದಾರೆ.

ಘಟಕವನ್ನು ಎರಡು ದಿನಗಳ ಕಾಲ ಮುಚ್ಚಲಾಗಿದೆ ಎಂದು ಔರಂಗಾಬಾದ್ ಜಿಲ್ಲಾಧಿಕಾರಿ ತಿಳಿಸಿದ್ದಾರೆಯಾದರೂ, ಸ್ಯಾನಿಟೈಜೇಷನ್ ಬಳಿಕ ಘಟಕ ಮತ್ತೆ ಕಾರ್ಯಾರಂಭ ಮಾಡಿದೆ ಎಂದು ಸಂಸ್ಥೆ ತಿಳಿಸಿದೆ.

SCROLL FOR NEXT