ಬೆಂಗಳೂರು: ಇದುವರೆಗೂ ರಾಜ್ಯದಲ್ಲಿ ಎಲ್ಲಿಯೂ ಕೊರೊನಾ ಪಾಸಿಟಿವ್ ಬಂದಿಲ್ಲ ಎಲ್ಲಾ ರಿಪೋರ್ಟ್ ಗಳಲ್ಲೂ ನೆಗೆಟಿವ್ ಅಂತ ವರದಿ ಬಂದಿದ್ದು ರೋಗದ ಲಕ್ಷಣಗಳ ಶಂಕೆ ಹಿನ್ನಲೆಯಲ್ಲಿ ಇಂದು ಮೂವರನ್ನು ಒಳರೋಗಿಗಳಾಗಿ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ.
ವಿಧಾನಸೌಧದಲ್ಲಿ ಕೊರೊನಾ ವೈರಾಣು ಹಾವಳಿ ಸಂಬಂಧ ರಾಜ್ಯದ ಸಮಗ್ರ ಮಾಹಿತಿಯನ್ನೊಳಗೊಂಡ ಹೆಲ್ತ್ ಬುಲೆಟಿನ್ ಬಿಡುಗಡೆಗೊಳಿಸಿ ಮಾತನಾಡಿದ ಅವರು,ಇದುವರೆಗೂ ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಬಂದಿಲ್ಲ.
ಆರೋಗ್ಯ ಇಲಾಖೆಯ ಅಧಿಕಾರಿಗಳ ನಿರಂತರ ಶ್ರಮ, ಮುನ್ನೆಚ್ಚರಿಕೆ ಕ್ರಮದಿಂದ ಈ ವೈರಾಣುಗಳನ್ನು ಒಳಗಡೆ ಬಿಡದ ರೀತಿ ಕ್ರಮ ಕೈಗೊಳ್ಳಲಾಗಿದೆ ಈಗಾಗಲೇ ರಾಜ್ಯದಲ್ಲಿ 72,542 ಜನರನ್ನು ತಪಾಸಣೆ ಮಾಡಲಾಗಿದೆ.ಕಳೆದ ಎರಡು ದಿನಗಳಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 49594 ಪ್ರಯಾಣಿಕರ ತಪಾಸಣೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.