ರಾಜ್ಯ

ಕೆ ಸಿ ವ್ಯಾಲಿಯ ನೀರಿಗೆ ಕಳ್ಳರ ಕಣ್ಣು: ಕೋಲಾರದಲ್ಲಿ ಕಾವಲು ಕಾಯೋರು ಯಾರು?

Srinivasamurthy VN

ಕೋಲಾರ: ಸರ್ಕಾರಗಳು ಸದುದ್ದೇಶದಿಂದ ಯಾವುದೇ ಕೆಲಸ ಕೈಗೊಂಡರೂ ಅದಕ್ಕೆ ಕತ್ತರಿ ಹಾಕೋರು, ಹಾಳು ಮಾಡೋರು ಇದ್ದೇ ಇರ್ತಾರೆ. ಇದೀಗ ಕೋಲಾರದಲ್ಲೂ ಇಂತಹುದೇ ಕೃತ್ಯ ನಡೆಯುತ್ತಿದೆ.
         
ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ಕೆರೆಗಳಿಗೆ ಹರಿಸಲಾಗುತ್ತಿರುವ ಕೆಸಿ ವ್ಯಾಲಿಯ ಸಂಸ್ಕರಿಸಿದ ನೀರಿಗೆ ಕಳ್ಳರ ಕಾಟ ಹೆಚ್ಚಾಗಿದ್ದು, ಅನಧಿಕೃತ ಸಂಪರ್ಕ ಅಳವಡಿಸಿ ನೀರನ್ನು ಕದಿಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. 
         
ಸತತ ಬರಗಾಲದಿಂದಾಗಿ ಜಿಲ್ಲೆಯ ಕೆರೆಗಳು ಸಂಪೂರ್ಣವಾಗಿ ಬತ್ತಿಹೋಗಿವೆ. 1500 ಅಡಿ ಕೊರೆದರೂ ನೀರು ದೊರೆಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಇಂದು ನಿನ್ನೆಯ ಸಂಕಷ್ಟ್ರವಲ್ಲ, ಹತ್ತು, ಹದಿನೈದು ವರ್ಷಗಳಿಂದಲೂ ಇದೇ ಪರಿಸ್ಥಿತಿಯಿರುವ ಕಾರಣ ಅಂತರ್ಜಲ ವೃದ್ಧಿಗೊಳಿಸಲು ಸಂಸ್ಕರಿಸಿದ ನೀರು ಕೆರೆಗಳಿಗೆ ಬಿಡುವ ಯೋಜನೆ ರೂಪಿಸಲಾಗಿದೆ. 

ಅದರಂತೆ ಬೆಂಗಳೂರಿನ ಕೆ.ಸಿ.ವ್ಯಾಲಿ ಕಣಿವೆಯಿಂದ ಎರಡು ಹಂತಗಳಲ್ಲಿ ಸಂಸ್ಕರಿಸಿದ ನೀರು ಈಗಾಗಲೇ 60ಕ್ಕೂ ಹೆಚ್ಚಿನ ಕೆರೆ, ಕಾಲುವೆಗಳಿಗೆ ಹರಿದಿದ್ದು, ಕೆ.ಸಿ.ವ್ಯಾಲಿ ನೀರು ಹರಿಯುತ್ತಿರುವ ಭಾಗಗಳಲ್ಲಿ ಅಂತರ್ಜಲ ವೃದ್ಧಿಯಾಗಿರುವುದು ಸಾಬೀತಾಗಿದೆ. ಇವೆಲ್ಲದರ ನಡುವೆ ಕೆ.ಸಿ.ವ್ಯಾಲಿ ನೀರು ಹರಿಯುತ್ತಿರುವ ಕಾಲುವೆಗಳಿಂದ ನೀರು ಕದಿಯುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅನಧಿಕೃತ ಸಂಪರ್ಕಗಳನ್ನು ತಡೆಯುವ ನಿಟ್ಟಿ ನಲ್ಲಿಜಿಲ್ಲಾಡಳಿತ ಮುಂದಾಗಿಲ್ಲ. ಪರಿಣಾಮ ಅನಧಿಕೃತ ಸಂಪರ್ಕದ ಮೂಲಕ ನೀರನ್ನು ಕದಿಯುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

ಹೀಗಾದರೆ ಸರ್ಕಾರದ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡೀತೇ?  ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಲು ಸಾಧ್ಯವಾದೀತೆ ಎಂಬ ಪ್ರಶ್ನೆ ಮೂಡಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಣ್ಣುಮುಚ್ಚಿ ಕೂರದೆ, ಕೆ ಸಿ ವ್ಯಾಲಿಯ ನೀರನ್ನು ಕದಿಯುವವರಿಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

SCROLL FOR NEXT