ಕಲಬುರಗಿ: ದೇಶದ ಮೊದಲ ಕೋರೋನಾ ಸಾವು ರಾಜ್ಯದ ಕಲಬುರಗಿಯಲ್ಲಿ ಸಂಭವಿಸಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಆರೋಗ್ಯ ಸಚಿವ ಶ್ರೀರಾಮುಲು ಅವರು ಜಿಲ್ಲೆಯ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ವೈರಸ್'ಗೆ ಕಲಬುರಗಿಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ವೈರಸ್ ಭೀತಿ ಮತ್ತಷ್ಟು ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೋಂಕಿಗೆ ಕಡಿವಾಣ ಹಾಕುವ ಸಲುವಾದಿ ಒಂದು ವಾರ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಅಲ್ಲದೆ, ಇಂದು ಬೆಳಿಗ್ಗೆ ಸ್ವತಃ ಆರೋಗ್ಯ ಸಚಿವರೇ ಕಲಬುರಗಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ವೈರಸ್ ಸೋಂಕು ತಗುಲಿರುವ ಶಂಕಿತರನ್ನು ಇರಿಸಲು ಪ್ರತ್ಯೇಕ ವಾರ್ಡ್'ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ವಾರ್ಡ್'ಗಳಿಗೆ ಭೇಟಿ ನೀಡಿದ ಸಚಿವರು ಪರಿಶೀಲನೆ ನಡೆಸಿದರು.
ಪ್ರತ್ಯೇಕ ವಾರ್ಡ್'ಗಳನ್ನು ಪರಿಶೀಲನೆ ನಡೆಸಿದ ಆರೋಗ್ಯ ಸಚಿವರು, ವೈದ್ಯರಿಂದ ಸಮಗ್ರ ಮಾಹಿತಿ ಪಡೆದುಕೊಂಡರು. ಈ ವೇಳೆ ಮಾತನಾಡಿರುವ ಸಚಿವರು, ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಅಲರ್ಟ್ ಆಗಿರುವಂತೆ ವೈದ್ಯರಿಗೆ ಸೂಚನೆ ನೀಡಿದ್ದಾರೆ.