ರಾಜ್ಯ

ಕೊರೋನಾ ಎಫೆಕ್ಟ್: ರಾಜ್ಯದ ಶಕ್ತಿಸೌಧ, ನ್ಯಾಯಾಲಯಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ

Lingaraj Badiger

ಬೆಂಗಳೂರು: ಕೊರೋನಾ ಭೀತಿ‌ ಹಿನ್ನೆಲೆಯಲ್ಲಿ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡಗಳಿಗೆ ಹಾಗೂ ರಾಜ್ಯ ನ್ಯಾಯಾಲಯಗಳಿಗೆ ಸಾರ್ವಜನಿಕರಿಗೆ ಷರತ್ತುಬದ್ಧ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

ಈ ಸಂಬಂಧ ಆದೇಶ ಹೊರಡಿಸಿರುವ ಸರ್ಕಾರ, ಸಾರ್ವಜನಿಕರು ಮಧ್ಯಾಹ್ನ 3 ಗಂಟೆ ಬಳಿಕವೇ ಶಕ್ತಿ ಕೇಂದ್ರಕ್ಕೆ ಬರುವಂತೆ ಸೂಚನೆ ನೀಡಲಾಗಿದೆ.

ನಿರ್ದಿಷ್ಟ ಕಾರಣ ಅಥವಾ ಉದ್ದೇಶ ಇದ್ದರೆ ಮಾತ್ರ ವಿಧಾನಸೌಧ/ವಿಕಾಸಸೌಧ ಪ್ರವೇಶಿಸಬಹುದು. ಅನಗತ್ಯವಾಗಿ ಬಂದವರಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ.

ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡಕ್ಕೆ ಸಾರ್ವಜನಿಕರ ಭೇಟಿ ಹೆಚ್ಚಾಗಿರುವ ಹಿನ್ನೆಲೆ ಈ ನಿರ್ಬಂಧ ಹೇರಲಾಗಿದೆ. ಈಗಾಗಲೇ ವಿಧಾನಸಭೆ/ವಿಧಾನ ಪರಿಷತ್ ಗ್ಯಾಲರಿಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಇನ್ನು ಕೊರೋನಾ ವೈರಾಣು ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯದ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಹೈಕೋರ್ಟ್ ಸೇರಿದಂತೆ ಬೆಂಗಳೂರಿನ ಇತರ ವಿಚಾರಣಾ ನ್ಯಾಯಾಲಯಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. 

ಈ ಆದೇಶ ಮಾ. 19ರಿಂದ ಸಿಟಿ ಸಿವಿಲ್ ನ್ಯಾಯಾಲಯ, ಜಿಲ್ಲಾ ನ್ಯಾಯಾಲಯ ಮತ್ತು ನಗರದಲ್ಲಿ ಕೆಲಸ ನಿರ್ವಹಿಸುತ್ತಿರುವ ಗ್ರಾಮಾಂತರ ಜಿಲ್ಲೆಯ ನ್ಯಾಯಾಲಯಗಳು, ಮ್ಯಾಜಿಸ್ಟ್ರೇಟ್, ಮೇಯೋ ಹಾಲ್, ಕಾರ್ಮಿಕ ಮತ್ತು ಕೌಟುಂಬಿಕ ನ್ಯಾಯಾಲಯಗಳು ಮತ್ತು ನ್ಯಾಯಾಧಿಕರಣಗಳಿಗೆ ಅನ್ವಯವಾಗಲಿದೆ. 

ಕೇವಲ ವಕೀಲರು, ನ್ಯಾಯಾಲಯದ ಸಿಬ್ಬಂದಿ, ಸರ್ಕಾರಿ ಮತ್ತು ಸ್ಥಳೀಯ ಪ್ರಾಧಿಕಾರಗಳ ಅಧಿಕಾರಿಗಳು, ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿಗೆ ಮಾತ್ರ ನ್ಯಾಯಾಲಯಕ್ಕೆ ಪ್ರವೇಶ ನೀಡಲಾಗುತ್ತದೆ. 

ನ್ಯಾಯಾಲಯಗಳಲ್ಲಿ ವ್ಯಾಜ್ಯ ಹೊಂದಿರುವ ಸಾರ್ವಜನಿಕರು ಸಂಬಂಧಿಸಿದ ವಕೀಲರು ನೀಡಿದ ಪ್ರಮಾಣಪತ್ರಗಳನ್ನು ತೋರಿಸಿ ಪ್ರವೇಶ ಪಡೆಬಹುದು. ಇದರಲ್ಲಿ ವಕೀಲರು ಅವರಿಗೆ ಪ್ರವೇಶ ನೀಡಲು ಕಾರಣ ನಮೂದಿಸಿರಬೇಕು. 

ಉಳಿದಂತೆ ಸಾರ್ವಜನಿಕರು ಕೋರ್ಟ್ ಪ್ರವೇಶಿಸುವ ಮುನ್ನ ಅರ್ಜಿ ಭರ್ತಿ ಮಾಡಬೇಕು. ಅದರಲ್ಲಿ ಹೊಸದಾಗಿ ಅರ್ಜಿ ಸಲ್ಲಿಸುವುದಾದಲ್ಲಿ ವಿವರಗಳನ್ನು ದಾಖಲಿಸಬೇಕು. ಅದನ್ನು ಪರಿಶೀಲಿಸಿದ ನಂತರ ಅಧಿಕಾರಿಗಳು ಪ್ರವೇಶ ನೀಡಬೇಕೆ ಬೇಡವೇ ಎಂಬ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಆದೇಶ ಹೊರಡಿಸಿದ್ದಾರೆ.

SCROLL FOR NEXT