ರಾಜ್ಯ

ಖಾಸಗಿ ವಾಹನಗಳ ದುರುಪಯೋಗ: ಡಿಸಿಎಂ ಸವದಿ ಎಚ್ಚರಿಕೆ

Lingaraj Badiger

ಬೆಂಗಳೂರು: ಕರೋನಾ ಪಿಡುಗನ್ನು ತಡೆಗಟ್ಟುವ ಮುನ್ನೆಚ್ಚರಿಕಾ ಕ್ರಮವಾಗಿ ಸಾರಿಗೆ ಸಂಸ್ಥೆಗಳ ಬಸ್ಸುಗಳನ್ನು ಮತ್ತು ರೈಲು ಸಂಚಾರಗಳನ್ನು ಕಡಿಮೆಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಕೊರೋನಾ ಸೋಂಕಿನ ಭೀತಿಯ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಹೆಚ್ಚಿನ ಹಣವನ್ನು ಪ್ರಯಾಣಿಕರಿಂದ ಸುಲಿಗೆ ಮಾಡಿ ಕೆಲವೆಡೆ ಖಾಸಗಿ ವಾಹನಗಳು, ಖಾಸಗಿ ಬಸ್ಸುಗಳ ಮತ್ತು ಆಟೋರಿಕ್ಷಾಗಳ ಮಾಲೀಕರು ಪ್ರಯಾಣಿಕರನ್ನು ಶೋಷಿಸುತ್ತಿರುವ ಪ್ರಕರಣಗಳು ಕಂಡು ಬರುತ್ತಿವೆ. ಅಷ್ಟೇ ಅಲ್ಲ ಕೆಲವು ಜಿಲ್ಲೆಗಳನ್ನು ಈಗಾಗಲೇ ಲಾಕ್‌ಡೌನ್‌ ಜಿಲ್ಲೆಗಳೆಂದು ಘೋಷಿಸಲಾಗಿದ್ದು, ಇಂತಹ ಕಡೆಗಳಿಗೆ ಅಂತರ್ ಜಿಲ್ಲಾ ಬಸ್ಸುಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಸಾರ್ವಜನಿಕರ ಆರೋಗ್ಯದ ಹಿತರಕ್ಷಣೆಯನ್ನು ಗಮನಿಸಿ ಕೈಗೊಳ್ಳಲಾದ ಸರ್ಕಾರದ ಈ ನಿರ್ಧಾರವನ್ನು ಯಾರೂ ಉಲ್ಲಂಘಿಸಬಾರದು. ಈಗಾಗಲೇ ಇಂತಹ ಪ್ರಕರಣಗಳನ್ನು ತಡೆಗಟ್ಟಬೇಕೆಂದು ಸಾರಿಗೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದಾಗ್ಯೂ ಇಂತಹ ಪ್ರಕರಣಗಳು ಮರುಕಳಿಸಿದರೆ ಅಂತಹವರ ವಿರುದ್ಧ ಬಿಗಿ ಕ್ರಮ ಕೈಗೊಳ್ಳಲು ಹಿಂದೆಮುಂದೆ ನೋಡುವುದಿಲ್ಲ. ಜನರ ಜೀವದ ಜೊತೆಗೆ ಚೆಲ್ಲಾಟವಾಡಿ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಹವಣಿಸಿದರೆ ಅಂತಹವರಿಗೆ ತಕ್ಕಶಾಸ್ತಿ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಕೊರೋನಾ ಮಹಾಮಾರಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳುತ್ತಿರುವ ಈ ಎಲ್ಲ ಕ್ರಮಗಳಿಗೆ ಖಾಸಗಿ ವಾಹನ ಸಂಸ್ಥೆಗಳು ಮತ್ತು ಸಾರ್ವಜನಿಕರು ತಮ್ಮ ಸಂಪೂರ್ಣ ಸಹಕಾರವನ್ನು ನೀಡಬೇಕೆಂದು ಮತ್ತೊಮ್ಮೆ ತಮ್ಮಲ್ಲಿ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇನೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SCROLL FOR NEXT