ರಾಜ್ಯ

ಯುಗಾದಿ ಶುಭದಿನ, ಜೀವನದ ಜೊತೆ ಜೂಜಾಟ ಆಡಬೇಡಿ:ಸರ್ಕಾರ, ಪೊಲೀಸರಿಂದ ಮನವಿ

Sumana Upadhyaya

ಮೈಸೂರು/ಬೆಂಗಳೂರು: ಇಂದು ಬುಧವಾರ ಹಿಂದೂ ಧರ್ಮೀಯರ ಬಹು ದೊಡ್ಡ ಹಬ್ಬ ಯುಗಾದಿ. ಆದರೆ ಕೊರೋನಾ ವೈರಸ್ ಭೀತಿ ಸಾಮಾನ್ಯ ಜನತೆಯನ್ನು ಕಂಗಾಲಾಗಿಸಿದೆ. ಹಬ್ಬದ ಸಂಭ್ರಮ-ಸಡಗರವನ್ನು ಮಂಕಾಗಿಸಿದೆ.

ಕೊರೋನಾ ವೈರಸ್ ನಿಯಂತ್ರಣ ಮೀರಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಪ್ರಧಾನಿ ಮೋದಿ 21 ದಿನಗಳ ಭಾರತದ ಸಂಪೂರ್ಣ ಲಾಕ್ ಡೌನ್ ನ್ನು ಕಳೆದ ಮಧ್ಯರಾತ್ರಿಯೇ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಇಂದಿನಿಂದ 21 ದಿನಗಳ ಕಾಲ ಅಗತ್ಯ ತುರ್ತು ಕೆಲಸ ಬಿಟ್ಟರೆ ಮನೆ ಬಿಟ್ಟು ಹೊರಗೆ ಹೋಗುವಂತಿಲ್ಲ.

ಸರ್ಕಾರದ ಆದೇಶ ಧಿಕ್ಕರಿಸಿದರೆ ಜನರಿಗೆ ತೊಂದರೆಯಾಗುವುದಂತೂ ಖಂಡಿತ. ಯುಗಾದಿ ಹಬ್ಬವೆಂದು ಇಂದು ಮಾರುಕಟ್ಟೆಯಲ್ಲಿ ತರಕಾರಿ, ಹೂವು, ಹಣ್ಣು ಕೊಳ್ಳಲೆಂದು ಜನದಟ್ಟಣೆ ಸೇರಿದರೆ ಅಲ್ಲಿಗೆ ಪೊಲೀಸರು ಬಂದು ಬೆದರಿಸುವುದಂತೂ ಖಂಡಿತ. ಹಬ್ಬವೆಂದು ಜೀವನದ ಜೊತೆ ಆಟವಾಡಬೇಡಿ ಎಂದು ಪೊಲೀಸರು, ಸರ್ಕಾರ ಈಗಾಗಲೇ ಜನರಿಗೆ ಎಚ್ಚರಿಕೆ ನೀಡಿದೆ.

ಸಾಮಾನ್ಯವಾಗಿ ಯುಗಾದಿ ಎಂದರೆ ಜನರು ಬೆಳಗ್ಗೆಯಿಂದಲೇ ಹಳ್ಳಿಗಳ ಕಡೆಯಲ್ಲಿ ಜೂಜಾಟ, ಕಾರ್ಡುಗಳ ಆಟದಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯ. ಜನರು ಶಾಲಾ ಕಟ್ಟಡಗಳು, ತೋಟ, ಮರದ ಅಡಿಗಳಲ್ಲಿ ಇಂದಿನಿಂದ ಊರವರೆಲ್ಲಾ ಕನಿಷ್ಠ ಎರಡು ದಿನ ಸೇರಿ ವಿನೋದಗಳಲ್ಲಿ ತೊಡಗುತ್ತಾರೆ.

ಆದರೆ ಹಲವು ಹಳ್ಳಿಗಳ ಕಡೆಗಳಲ್ಲಿ ಗ್ರಾಮದ ಹಿರಿಯರು ಜನರು ಗುಂಪು ಗುಂಪಾಗಿ ಸೇರುವುದು ಕ್ಷೇಮವಲ್ಲ, ಒಂದೆಡೆ ಸೇರಿ ಆಟ, ವಿನೋದಗಳಲ್ಲಿ ಭಾಗವಹಿಸುವುದು ಬೇಡ ಎಂದು ಹೇಳುತ್ತಿದ್ದಾರೆ. ಇದು ಸಹಜವಾಗಿಯೇ ಹಳ್ಳಿಗಳಲ್ಲಿ ಯುವಕರಿಗೆ ನಿರಾಸೆ ತಂದಿದೆ. ಸ್ಥಳೀಯ ಪೊಲೀಸರು ಮತ್ತು ಕಂದಾಯ ಅಧಿಕಾರಿಗಳಿಗೆ ಊರು ಕಡೆಗಳಲ್ಲಿ ಜನರು ಸೇರಿ ಜೂಜಾಟಗಳಲ್ಲಿ ತೊಡಗುವುದನ್ನು, ಮದ್ಯ, ಮಾಂಸ ಮಾರಾಟಗಳನ್ನು ತಡೆಯುವುದು ಸವಾಲಾಗಿದೆ.

SCROLL FOR NEXT