ರಾಜ್ಯ

ಲಾಕ್ ಡೌನ್ ವೇಳೆ ಬೈಕ್ ತಡೆದಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದಾತನ ಕಾಲಿಗೆ ಗುಂಡೇಟು

Srinivasamurthy VN

ಬೆಂಗಳೂರು: ದೇಶಾದ್ಯಂತ ಲಾಕ್‌ಡೌನ್‌ ಸಂದರ್ಭದಲ್ಲಿ ಬುಧವಾರ ಪೊಲೀಸ್ ಪೇದೆಗೆ ಹಲ್ಲೆ ನಡೆಸಿ ಪೊಲೀಸ್ ವಶದಲ್ಲಿರುವ ಆರೋಪಿ ತಾಜುದ್ದೀನ್ ಎಂಬಾತನ ಕಾಲಿಗೆ ಪೊಲೀಸರು ಗುರುವಾರ ಬೆಳಗ್ಗೆ ಗುಂಡು ಹೊಡೆದಿದ್ದಾರೆ.

ಆರೋಪಿ ತಾಜುದ್ದೀನ್‌ನನ್ನು ಗುರುವಾರ ನಸುಕಿನಲ್ಲಿ ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸುವ ವೇಳೆ ಆತ ಪರಾರಿಯಾಗಲು ಯತ್ನಿಸಿದ್ದಾನೆ. ಸ್ವಲ್ಪ ದೂರ ಓಡಿದ ಆರೋಪಿಯನ್ನು ಬಂಧಿಸಲು ಹೋದ ಪೊಲೀಸರ ಮೇಲೆಯೇ ಆತ ಕಲ್ಲು ಮತ್ತು ಇಟ್ಟಿಗೆ ತುಂಡುಗಳನ್ನು  ಎಸೆದಿದ್ದಾನೆ. ಈ ವೇಳೆ ಪಿಎಸ್ಐ ರೂಪಾ ಮತ್ತು ಹೆಡ್ ಕಾನ್‌ಸ್ಟೆಬಲ್ ಮಂಜಣ್ಣ ಅವರ ಮೇಲೆ ಆರೋಪಿ ಹಲ್ಲೆ ನಡೆಸಿದ್ದಾನೆ. ಹೀಗಾಗಿ ಅನ್ಯ ಮಾರ್ಗವಿಲ್ಲದೇ ಪೊಲೀಸರು ಆತನ ಕಾಲಿದೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಏನಿದು ಘಟನೆ?
ಬೆಂಗಳೂರಿನ ಸಂಜಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲ ಕಿಡಿಗೇಡಿಗಳು ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ದುರ್ವರ್ತನೆ ತೋರಿದ್ದರು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಪೊಲೀಸರು ಚೆಕ್ ಪೊಸ್ಟ್ ನಲ್ಲಿ ಗಾಡಿ ತಪಾಸಣೆ ಮಾಡುತ್ತಿದ್ದರು. ಅಲ್ಲದೆ ಮನೆಯಿಂದ ಹೊರಗೆ ಬಂದಿದ್ದಕ್ಕೆ  ಸಾರ್ವಜನಿಕರನ್ನು ಪ್ರಶ್ನೆ ಮಾಡಿದ್ದರು. ಇದರಿಂದ ಸಿಟ್ಟಿಗೆದ್ದ ಕಿಡಿಗೇಡಿಗಳು ಪೊಲೀಸರನ್ನ ನೆಲಕ್ಕೆ ತಳ್ಳಿ ಅವರ ಮೇಲೆಯೇ ಹಲ್ಲೆಗೈದಿದ್ದರು. ಘಟನೆಯಿಂದಾಗಿ ಪೊಲೀಸ್ ಪೇದೆಗಳಿಗೆ ಗಾಯಗಳಾಗಿತ್ತು. 

ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಶಕ್ಕೆ  ಪಡೆದಿದ್ದ ಪೊಲೀಸರು ರಾತ್ರಿ ಸ್ಥಳ ಮಹಜರು ಮಾಡಲು ಕರೆದೊಯ್ದಿದ್ದರು. ಈ ವೇಳೆ ತಾಜುದ್ದೀನ್ ಪೊಲೀಸರ ಮೇಲೆ ಕಲ್ಲು ಎಸೆದು ಎಸ್ಕೇಪ್ ಆಗಲು ಯತ್ನಿಸಿದ್ದ. ಇದರಿಂದಾಗಿ ಸಂಜಯನಗರ ಪೊಲೀಸ್ ಇನ್ಸ್‌ಪೆಕ್ಟರ್ ಬಾಲಾಜಿ ಅವರು ಆರೋಪಿ ಮೇಲೆ ಫೈರಿಂಗ್ ಮಾಡಿದ್ದಾರೆ.  ಘಟನೆಯಲ್ಲಿ ಮಹಿಳಾ ಪಿಎಸ್‍ಐ ರೂಪಾ ಅವರ ಕೈಗೆ ಗಂಭೀರವಾಗಿ ಗಾಯವಾಗಿದೆ. ಆರೋಪಿ ಹಾಗೂ ರೂಪಾ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

SCROLL FOR NEXT