ತುಮಕೂರಿನಲ್ಲಿ ಕೊರೋನಾ ಪೀಡಿತ ವೃದ್ಧ ಸಾವು!
ತುಮಕೂರಿನಲ್ಲಿ ಕೊರೋನಾ ವೈರಸ್ ಸೋಂಕಿಗೆ ಮೊದಲ ಸಾವು ವರದಿಯಾಗಿದೆ.
ತುಮಕೂರು: ಕರ್ನಾಟಕದಲ್ಲಿ ಕೋವಿಡ್-19 ಕ್ಕೆ ತುತ್ತಾಗಿ ವ್ಯಕ್ತಿ ಮೃತಪಟ್ಟಿರುವ 3 ನೇ ಪ್ರಕರಣ ವರದಿಯಾಗಿದೆ.
ತುಮಕೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 65 ವರ್ಷದ ಹಿರಿಯ ನಾಗರಿಕ ಮೃತಪಟ್ಟಿರುವ ವ್ಯಕ್ತಿ. ಈತ ಮಾ.5 ರಂದು ಸಂಪರ್ಕ್ ಕ್ರಾಂತಿ ಎಕ್ಸ್ ಪ್ರೆಸ್ ನಲ್ಲಿ ದೆಹಲಿಗೆ ಪ್ರಯಾಣಿಸಿ ಜಾಮಿಯಾ ಮಸೀದಿಗೆ ಮಾ.7-11 ವರೆಗೆ ಭೇಟಿ ನೀಡಿದ್ದರು. ಮಾ.14 ರಂದು ಕೊಂಗು ಎಕ್ಸ್ ಪ್ರೆಸ್ ನಲ್ಲಿ ತುಮಕೂರಿಗೆ ವಾಪಸ್ಸಾಗಿದ್ದರು. ಕೊರೋನಾ ಸೋಂಕಿಗೆ ತುತ್ತಾಗಿದ್ದ ಈ ವ್ಯಕ್ತಿಯ ಜೊತೆ ಪ್ರಯಾಣಿಸಿದ್ದ 13 ಜನರ ಮೇಲೆ ಈಗ ನಿಗಾ ವಹಿಸಲಾಗಿದೆ.
ಶಿರಾ ಮೂಲದ ಈ ವ್ಯಕ್ತಿಗೆ ಮಾ.18 ರಂದು ಜ್ವರ, ಕೆಮ್ಮು ಕಾಣಿಸಿಕೊಂಡು ಶಿರಾದಲ್ಲಿನ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಮಾ.21 ರಂದು ಸಹ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಕೊರೋನಾ ಸೋಂಕು ದೃಢಪಟ್ಟ ಬೆನ್ನಲ್ಲೇ ವ್ಯಕ್ತಿಯನ್ನು ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಮಾ.27 ರಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಮಾ.23 ರಂದು ಹೊರರೋಗಿ ವಾರ್ಡ್ ನಲ್ಲಿ ಚಿಕಿತ್ಸೆ ಪಡೆದು ಶಿರಾಗೆ ವಾಪಸ್ಸಾಗಿದ್ದರು. ಮಾ.24 ರಂದು ಬೆಳಿಗ್ಗೆ 4 ಗಂಟೆಗೆ ಐಸೊಲೇಷನ್ ವಾರ್ಡ್ ಗೆ ದಾಖಲಿಸಲಾಗಿತ್ತು. ಕೊರೋನಾ ವೈರಸ್ ಸೋಂಕಿತ ವೃದ್ಧನ ಕುಟುಂಬದವರೂ ಸೇರಿ 20 ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು ನಿಗಾ ಇಡಾಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.