ರಾಜ್ಯ

ಸ್ವಸಹಾಯ ಸಂಘಗಳು, ರೈತರಿಗೆ ರಾಜ್ಯ ಸರ್ಕಾರ ನೆರವು:ಸಾಲ ಮರು ಪಾವತಿಗೆ ಮೂರು ತಿಂಗಳು ವಿನಾಯ್ತಿ

Sumana Upadhyaya

ಬೆಂಗಳೂರು: ಕೊರೋನಾ ವೈರಸ್ ಬಿಕ್ಕಟ್ಟು ಹಿನ್ನೆಲೆಯಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟವನ್ನು ನಿಭಾಯಿಸಲು ರೈತರು ಮತ್ತು ಸ್ವಸಹಾಯ ಸಂಘಗಳ ಸದಸ್ಯರಿಗೆ(ಎಸ್ಎಚ್ ಜಿ) ನೆರವಾಗಲು ಮುಂದಾಗಿರುವ ರಾಜ್ಯ ಸರ್ಕಾರ ಸಾಲ ಮರುಪಾವತಿಗೆ ಮೂರು ತಿಂಗಳ ಕಾಲಾವಕಾಶ ನೀಡಿದೆ.

ನಿನ್ನೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸಚಿವ ಸಂಪುಟ ಸಭೆ ನಡೆಸಿ ರೈತರಿಗೆ ದೀರ್ಘಾವಧಿ ಮತ್ತು ಮಧ್ಯಮ ಅವಧಿ ಕೃಷಿ ಸಾಲಗಳ ಬಡ್ಡಿಮನ್ನಾ ಪಾವತಿಯ ದಿನಾಂಕವನ್ನು ಕೂಡ ವಿಸ್ತರಿಸುವ ಮೂಲಕ ಸಹಾಯ ಪ್ರಕಟಿಸಿದರು. ಈ ಬಡ್ಡಿಮನ್ನಾ ಸೌಲಭ್ಯವನ್ನು ಪಡೆದುಕೊಳ್ಳಲು ರೈತರು ಸಾಲದ ಮೂಲ ಮೊತ್ತವನ್ನು(principle amount) ಪಾವತಿಸುವ ದಿನಾಂಕವನ್ನು ಈ ತಿಂಗಳ 31ರಿಂದ ಜೂನ್ ಕೊನೆಯ ದಿನಾಂಕದವರೆಗೆ ವಿಸ್ತರಿಸಲಾಗಿದೆ.

ನಿನ್ನೆ ಮುಖ್ಯಮಂತ್ರಿ ಪ್ರಕಟಿಸಿದ ಯೋಜನೆಗಳಲ್ಲಿ ಏನೇನು ಲಾಭಗಳಿವೆ?: ರಾಜ್ಯ ಸರ್ಕಾರ ಸಹಕಾರಿ ಸೊಸೈಟಿಗಳ ಮೂಲಕ 3 ಲಕ್ಷಗಳವರೆಗೆ ಬಡ್ಡಿರಹಿತ ಸಾಲ ಮತ್ತು 3ರಿಂದ 10 ಲಕ್ಷ ರೂಪಾಯಿಗಳವರೆಗೆ ಮಧ್ಯಮ ಮತ್ತು ದೀರ್ಘಾವಧಿ ಸಾಲಗಳನ್ನು ಕೃಷಿ ಚಟುವಟಿಕೆಗಳಿಗೆ ಶೇಕಡಾ 3ರ ಬಡ್ಡಿದರದಲ್ಲಿ ಮತ್ತು ಸ್ವಸಹಾಯ ಗುಂಪುಗಳಲ್ಲಿರುವ ಮಹಿಳೆಯರಿಗೆ ಸಾಲಗಳನ್ನು ನೀಡಿತ್ತು.

ಇದೀಗ ಕೊರೋನಾ ವೈರಸ್ ಬಂದ ನಂತರ ಬಹುತೇಕ ಮಂದಿಗೆ ಕೆಲಸಗಳಿಲ್ಲದೆ ಆರ್ಥಿಕ ಸಂಕಷ್ಟ ಎದುರಾಗಿದೆ. ಇದರಿಂದ ನಮಗೆ ಸಾಲ ಮರುಪಾವತಿ ಮಾಡಲು ಕಷ್ಟವಾಗುತ್ತದೆ, ದಿನಾಂಕ ಮುಂದೂಡಿ ಎಂದು ಅನೇಕ ಸ್ವಸಹಾಯ ಸಂಘಗಳ ಸದಸ್ಯರಿಂದ ಮತ್ತು ರೈತರಿಂದ ಮನವಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ.

ಪ್ರಾಥಮಿಕ ಕೃಷಿ ಸಹಕಾರ ಬ್ಯಾಂಕುಗಳು, ಸೊಸೈಟಿಗಳು, ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಲ್ಲಿ ಸಾಲ ಪಡೆದಿರುವ ರಾಜ್ಯದ 95 ಸಾವಿರಕ್ಕೂ ಅಧಿಕ ರೈತರ 560 ಕೋಟಿ ರೂಪಾಯಿ ಸಾಲದ ಮೇಲಿನ 466 ಕೋಟಿ ರೂಪಾಯಿಗಳಷ್ಟು ಸಾಲವನ್ನು ಮನ್ನಾ ಮಾಡುವುದಾಗಿ ಕಳೆದ ಫೆಬ್ರವರಿಯಲ್ಲಿ ಸರ್ಕಾರ ಘೋಷಿಸಿತ್ತು.

ಈ ತಿಂಗಳ ಮಧ್ಯ ಭಾಗದ ಹೊತ್ತಿಗೆ ರೈತರು 60 ಕೋಟಿ ರೂಪಾಯಿ ಮೂಲ ಮೊತ್ತವನ್ನು ಬ್ಯಾಂಕುಗಳಿಗೆ ಮರುಪಾವತಿ ಮಾಡಿದ್ದರು. ಬಡ್ಡಿಮನ್ನಾ ಯೋಜನೆಯ ಲಾಭವನ್ನು ರೈತರು ಪಡೆದುಕೊಳ್ಳಲು ಸಾಲ ಮರುಪಾವತಿ ದಿನಾಂಕವನ್ನು ಮುಂದೂಡುವಂತೆ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದ್ದರು.

SCROLL FOR NEXT