ರಾಜ್ಯ

ಸಾರಿಗೆ ನೌಕರರ ವೇತನ ಕಡಿತ ಮಾಡುವುದಿಲ್ಲ: ಲಕ್ಷ್ಮಣ ಸವದಿ

Nagaraja AB

ಬೆಂಗಳೂರು: ಸಾರಿಗೆ ನೌಕರರ ವೇತನ ಕಡಿತ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ

ರಾಜ್ಯ ಸರ್ಕಾರಿ ನೌಕರರ ಸಂಬಳದಲ್ಲಿ ಯಾವುದೇ ಕಡಿತ ಮಾಡಿಲ್ಲ. ನಮ್ಮ ಸಾರಿಗೆ ನೌಕರರಿಗೂ ಸಂಬಳ ಕಡಿತ ಮಾಡುವ ಯಾವುದೇ ಪ್ರಸ್ತಾವನೆ ನಮ್ಮ ಮುಂದೆ ಇಲ್ಲ. ಇನ್ನು ಎರಡು ದಿನದಲ್ಲಿ ಸಂಪೂರ್ಣವಾದ ವೇತನ ನೀಡುವ ಕುರಿತು ಚಿಂತನೆ ನಡೆಸುತ್ತಾ ಇದ್ದೇವೆ ಎಂದು ತಿಳಿಸಿದರು.

ಮೆಜೆಸ್ಟಿಕ್‌ನಲ್ಲಿ ಇಂದು ಕೂಡ ಜನಜಂಗುಳಿ
ಲಾಕ್‌ಡೌನ್‌ನಿಂದಾಗಿ ಬೆಂಗಳೂರಿನಲ್ಲಿ ಬಾಕಿಯಾಗಿದ್ದ ಕಾರ್ಮಿಕರನ್ನು ಇಂದು ಕೂಡ ಅವರವರ ಊರುಗಳಿಗೆ ಕಳುಹಿಸುವ ವ್ಯವಸ್ಥೆ ನಡೆಯಿತು.

ಕೆಎಸ್‌ಆರ್‌ಟಿಸಿ ಬಸ್‌ ಬಿಡಲಾಗಿದೆ ಎಂಬ ಮಾಹಿತಿ ಸಿಗುತ್ತಿದ್ದಂತೆ ನಿನ್ನೆ ನೂರಾರು ಕಾರ್ಮಿಕರು ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಇಂದು ಕೂಡ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ನಿನ್ನೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಇಂದು ಬೆಳಗ್ಗೆಯೇ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜಮಾಯಿಸಿದ್ದರು.

ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವ ಮಾಹಿತಿ ಪಡೆದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮತ್ತು ಕಂದಾಯ ಸಚಿವ ಆರ್.ಅಶೋಕ ಮೆಜೆಸ್ಟಿಕ್ ಬಸ್‌ ನಿಲ್ದಾಣಕ್ಕೆ ಆಗಮಿಸಿ ಆಹಾರ ಪೊಟ್ಟಣ ವಿತರಿಸಿದರು. 

ಎಲ್ಲಾ ಕಾರ್ಮಿಕರಿಗೂ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಯಾರು ಕೂಡ ಆತಂಕ ಪಡುವ ಅಗತ್ಯವಿಲ್ಲ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ಊರುಗಳಿಗೆ ತೆರಳಬೇಕು ಎಂದು ಸಾರಿಗೆ ಸಚಿವರು ಮನವಿ ಮಾಡಿದರು.

SCROLL FOR NEXT