ರಾಜ್ಯ

ಕರ್ನಾಟಕ: ರಾಜ್ಯಾದ್ಯಂತ 776 ಬಸ್‌ಗಳಲ್ಲಿ 30 ಸಾವಿರ ವಲಸೆ ಕಾರ್ಮಿಕರ ಸ್ಥಳಾಂತರ

Manjula VN

ಬೆಂಗಳೂರು: ವಲಸೆ ಕಾರ್ಮಿಕರನ್ನು ಸ್ವಂತ ಊರುಗಳಿಗೆ ತಲುಪಿಸಲು ಕೆಎಸ್‌ಆರ್‌ಟಿಸಿ ಸೋಮವಾರ 750ಕ್ಕೂ ಹೆಚ್ಚು ಬಸ್‌ ಗಳ ಮೂಲಕ ಸುಮಾರು 30 ಸಾವಿರ ಕಾರ್ಮಿಕರ ತಮ್ಮ ಊರುಗಳನ್ನು ತಲುಪಿಸಿತು.

ಲಾಕ್ ಡೌನ್ ಹಿನ್ನಲೆಯಲ್ಲಿ ರಾಜ್ಯದಲ್ಲಿ ಅತಂತ್ರಸ್ಥಿತಿಯಲ್ಲಿದ್ದ ವಲಸೆ ಕಾರ್ಮಿಕರಿಗಾಗಿ ರಾಜ್ಯ ಸರ್ಕಾರ ವಿಶೇಷ ಬಸ್ ಗಳನ್ನು ಓಡಿಸಿದ್ದು, ಸುಮಾರು 750ಕ್ಕೂ ಹೆಚ್ಚು ಬಸ್ ಗಳಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಕಾರ್ಮಿಕರನ್ನು ರವಾನೆ ಮಾಡಲಾಗಿದೆ.  ಕಳೆದ ಮೂರು ದಿನಗಳಿಂದ ಒಟ್ಟು 59,880 ಕಾರ್ಮಿಕರನ್ನು ಸ್ಥಳಾಂತರಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಈ ಹಿಂದೆ 2 ದಿನಗಳಿಗೆ ಮಾತ್ರ ಕಾರ್ಮಿಕರ ರವಾನೆ ಕಾರ್ಯಾಚರಣೆ ಚಾಲ್ತಿಯಲ್ಲಿರಲಿದೆ ಎಂದು ಹೇಳಲಾಗಿತ್ತಾದರೂ  ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನಿಲ್ದಾಣಕ್ಕೆ ಬಂದ ಕಾರಣ ರಾತ್ರಿ 11 ಗಂಟೆಯವರೆಗೆ ಬಸ್‌ಗಳನ್ನು ಓಡಿಸಲಾಯಿತು. ಉತ್ತರ ಕರ್ನಾಟಕದ ರಾಯಚೂರು, ಬಳ್ಳಾರಿ. ಯಾದಗಿರಿ ಮತ್ತು ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ವಿಶೇಷ ಬಸ್ ಗಳನ್ನು ಓಡಿಸಲಾಯಿತು.

ಇನ್ನೂ ಸಾಕಷ್ಟು ವಲಸೆ ಕಾರ್ಮಿಕರು ನಗರದಲ್ಲಿಯೇ ಇರುವುದರಿಂದ ಬಸ್ ಸಂಚಾರ ಮುಂದುವರೆಯುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡಿರುವ ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ಸಂಘದ ಅಧ್ಯಕ್ಷ ವಿನಯ್ ಶ್ರೀನಿವಾಸ್ ಅವರು, ಮೊದಲ ದಿನ ಸಾಕಷ್ಟು ಗೊಂದಲಗಳಿದ್ದವು. ಹೀಗಾಗಿ ಕಾರ್ಮಿಕರು ಕೊಂಚ ಆತಂಕದಲ್ಲಿದ್ದರು. ಆದರೆ ಇದೀಗ ಸರ್ಕಾರ ಗುರುವಾರದ ವರೆಗೂ ಬಸ್ ಓಡಿಸಲು ನಿರ್ಧರಿಸಿರುವುದು ಕಾರ್ಮಿಕರ ಆತಂಕ ದೂರ ಮಾಡಿದೆ ಎಂದು ಹೇಳಿದರು.

ಇನ್ನು ಇದೇ ವಿಚಾರವಾಗಿ ಸ್ಪಷ್ಟನೆ ನೀಡಿರುವ ಸರ್ಕಾರ ಹೊರ ರಾಜ್ಯಗಳಲ್ಲಿರುವವರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಅತಂಹವರನ್ನು ಕರೆತರಲು ಕ್ರಮ ಕೈಗೊಳ್ಳಲಾಗುತ್ತದೆ. ಸರ್ಕಾರದ ವೆಬ್ ಸೈಟ್ sevasindhu.karnataka.gov.in. ನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಹೇಳಿದೆ. ಅಂತೆಯೇ ಬೆಂಗಳೂರು ಕಚೇರಿಗಳಾದ ಬಿಬಿಎಂಪಿ, ಮತ್ತು ಇತರೆ ಸರ್ಕಾರಿ ಕಚೇರಿಗಳಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಮತ್ತು ಸಹಾಯಕ ಆಯುಕ್ತರ ಕಚೇರಿಯಲ್ಲೂ ಅರ್ಜಿ ಸಲ್ಲಿಕೆ ಮಾಡಬಹುದು ಎಂದು ಹೇಳಿದೆ.
 

SCROLL FOR NEXT