ಬೆಂಗಳೂರು: ಶಿವಾಜಿನಗರದಲ್ಲಿ 4, ಪಾದರಾಯನಪುರದಲ್ಲಿ ಮತ್ತೆ 2 ಪ್ರಕರಣ ಪತ್ತೆ, ಹೆಚ್ಚಿದ ಆತಂಕ!
ಬೆಂಗಳೂರು: ಕೊರೋನಾ ಮಹಾಮಾರಿಗೆ ತುತ್ತಾಗಿದ್ದ ಹೌಸ್ ಕೀಪರ್ ನಿಂದಾಗಿ ಇದೀಗ ಶಿವಾಜಿನಗರದಲ್ಲಿ ಮತ್ತೆ ನಾಲ್ವರಿಗೆ ಸೋಂಕು ತಗುಲಿದೆ. ಇನ್ನು ಪಾದರಾಯನಪುರದಲ್ಲೂ ಇಬ್ಬರಿಗೆ ಸೋಂಕು ತಲುಗಿದ್ದು ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 162ಕ್ಕೆ ಏರಿಕೆಯಾಗಿದೆ.
ಶಿವಾಜಿನಗರದಲ್ಲಿ ಕ್ವಾರಂಟೈನ್ ಗೆ ಒಳಗಾದವರನ್ನು ಇಟ್ಟಿದ್ದ ಹೊಟೇಲ್ ನಲ್ಲಿ ಹೌಸ್ ಕೀಪಿಂಗ್ ಕೆಲಸದಲ್ಲಿದ್ದ ವ್ಯಕ್ತಿಗೆ ಸೋಂಕು ತಗುಲಿತ್ತು. ಇದೀಗ ಈತನಿಂದ ಮತ್ತೆ ನಾಲ್ವರಿಗೆ ಸೋಂಕು ತಗುಲಿದೆ. ಇದೇ ವೇಳೆ ಪಾದರಾಯನಪುರದಲ್ಲೂ ಇಬ್ಬರಿಗೆ ಸೋಂಕು ಕಾಣಿಸಿಕೊಂಡಿದ್ದು ಒಂದೇ ದಿನ 7 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಪಾದರಾಯನಪುರದಲ್ಲಿ 48 ಮಂದಿಗೆ ರ್ಯಾಂಡಮ್ ಟೆಸ್ಟ್ ನಡೆಸಲಾಗಿತ್ತು. ಇದರಲ್ಲಿ ಇಬ್ಬರ ಟೆಸ್ಟ್ ನಲ್ಲಿ ಕೋವಿಡ್-19 ಪಾಸಿಟಿವ್ ಬಂದಿದೆ ಎಂದು ಸಿಎಚ್ಒ ವಿಜಯೇಂದ್ರ ತಿಳಿಸಿದ್ದಾರೆ.
ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 711ಕ್ಕೆ ಏರಿಕೆಯಾಗಿದೆ. ಈ ಪೈಕಿ 30 ಮಂದಿ ಸಾವನ್ನಪ್ಪಿದ್ದರೆ, 366 ಮಂದಿ ಗುಣಮುಖರಾಗಿದ್ದಾರೆ.