ಸಹಜ ಸ್ಥಿತಿಯತ್ತ ಬಾಗಲಕೋಟೆ 
ರಾಜ್ಯ

ಕೊರೋನಾ ವೈರಸ್ ಅಪಾಯದ ಮಧ್ಯೆ ಸಹಜ ಸ್ಥಿತಿಯತ್ತ ಮರಳುತ್ತಿರುವ ಬಾಗಲಕೋಟೆ

ಮಹಾಮಾರಿ ಕೊರೋನಾ ಭಾರತ ಸೇರಿದಂತೆ ವಿಶ್ವಾದ್ಯಂತ ತನ್ನ ಅಟ್ಟಹಾಸ ಮುಂದುವರಿಸಿರುವಾಗಲೇ ಎದುರಾಗಲಿರುವ ಅಪಾಯಗಳ ಮಧ್ಯೆಯೇ ಬಾಗಲಕೋಟೆ ನಗರ ಸಹಜ ಸ್ಥಿತಿಯತ್ತ ತನ್ನನ್ನು ತೆರೆದುಕೊಳ್ಳಲಾರಂಭಿಸಿದೆ.

ಬಾಗಲಕೋಟೆ: ಮಹಾಮಾರಿ ಕೊರೋನಾ ಭಾರತ ಸೇರಿದಂತೆ ವಿಶ್ವಾದ್ಯಂತ ತನ್ನ ಅಟ್ಟಹಾಸ ಮುಂದುವರಿಸಿರುವಾಗಲೇ ಎದುರಾಗಲಿರುವ ಅಪಾಯಗಳ ಮಧ್ಯೆಯೇ ಬಾಗಲಕೋಟೆ ನಗರ ಸಹಜ ಸ್ಥಿತಿಯತ್ತ ತನ್ನನ್ನು ತೆರೆದುಕೊಳ್ಳಲಾರಂಭಿಸಿದೆ.

ನಗರದ ಪ್ರಮುಖ ರಸ್ತೆಗಳಿಗೆ ಅಳವಡಿಸಲಾಗಿದ್ದ ಬ್ಯಾರಿಕೇಡ್‌ಗಳ್ನು ತೆರವುಗೊಳಿಸುವ ಕೆಲಸ ಶುಕ್ರವಾರ ಮಧ್ಯಾಹ್ನದಿಂದ ಆರಂಭಗೊಂಡಿತ್ತು. ಜಿಲ್ಲಾಡಳಿತ ಇಂದು ಬಹುತೇಕ ಅಂಗಡಿ ಮುಂಗಟ್ಟುಗಳ ಆರಂಭಕ್ಕೆ ಅವಕಾಶ ನೀಡಿದೆ. ಪರಿಣಾಮವಾಗಿ ನಗರದಲ್ಲಿ ವಾಣಿಜ್ಯ ಚಟುವಟಿಕೆಗಳು  ಎಂದಿಗಿಂತ ಹೆಚ್ಚು ಚುರುಕಾಗಿ ನಡೆದಿವೆ. ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳು ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ವ್ಯಾಪಾರ,ವಹಿವಾಟು ಜೋರಾಗಿರುವುದು ಕಂಡು ಬಂದಿತು. ನಗರದ ಜನತೆ ಕೂಡ ಎಂದಿನಂತೆ ತಮ್ಮ ಓಡಾಟವನ್ನು ಆರಂಭಿಸಿದ್ದಾರೆ. ಇದರಿಂದಾಗಿ ವಾಹನಗಳ  ಸಂಚಾರ ಭರಾಟೆ ಜೋರಾಗಿದೆ. ಇದುವರೆಗೂ ಮನೆ ಹಿಡಿದು ಕುಳಿತಿದ್ದ ವ್ಯಾಪಾರಸ್ಥರು, ಕಾರ್ಮಿಕ ವರ್ಗ ಮನೆ ಬಿಟ್ಟು ಹೊರ ಬಂದಿದೆ.

ಕೊರೋನಾ ಅಪಾಯದ ಮಧ್ಯೆಯೂ ವ್ಯಾಪಾರ,ವಹಿವಾಟು, ವಾಹನಗಳ ಓಡಾಟ ಆರಂಭಗೊಂಡಿರುವುದರಿಂದ ಜನತೆ ಭವಿಷ್ಯದಲ್ಲಿ ಎದುರಾಗಬಹುದಾದ ತೊಂದರೆ ಅರಿತು ತಮ್ಮನ್ನು ತಾವು ಸ್ವಯಂ ಶಿಸ್ತಿಗೆ ಅಳವಡಿಸಿಕೊಳ್ಳಬೇಕು. ಮನಬಂದಂತೆ ನಡೆದುಕೊಳ್ಳದಂತೆ ಸ್ಥಳೀಯ ಶಾಸಕ  ವೀರಣ್ಣ ಚರಂತಿಮಠ ಎಚ್ಚರಿಕೆ ಕೊಟ್ಟಿದ್ದಾರೆ. ವ್ಯಾಪಾರ, ಉದ್ಯೋಗವಿಲ್ಲದೆ ಮನೆಯಲ್ಲಿ ಕುಳಿತಿದ್ದ ಜನತೆ ಮುಂದೇನು ಎನ್ನುವ ಚಿಂತೆಯಲ್ಲಿರುವಾಗಲೇ ಎಲ್ಲವೂ ಎಂದಿನಂತೆ ಆರಂಭಗೊಂಡಿರುವುದು ಬಹುತೇಕ ಎಲ್ಲರಲ್ಲೂ ಸಂತಸದ ಛಾಯೆ ಕಂಡು ಬರುತ್ತಿದೆಯಾದರೂ ಮಹಾಮಾರಿ  ಯಾವುದೇ ಸಮಯದಲ್ಲಿಯೂ ತನ್ನ ಸ್ವರೂಪವನ್ನು ತೋರ್ಪಡಿಸುವ ಸಾಧ್ಯತೆಯ ಅಂಜಿಕೆ ಈಗಲೂ ಜನತೆಯನ್ನು ಕಾಡುತ್ತಲೇ ಇದೆಯಾದರೂ ಏನಾದರೂ ಆಗಲಿ ಬಂದದ್ದನ್ನು ಎದುರಿಸೋಣ ಎನ್ನುವ ಭಂಡತನದೊಂದಿಗೆ ವ್ಯಾಪಾರ, ವಹಿವಾಟು ಆರಂಭಿಸಿದ್ದಾರೆ.

ಕಡ್ಡಾಯವಾಗಿ ಮಾಸ್ಕ್ ಧರಿಸುವ ಮತ್ತು ಸಾಮಾಜಿಕ ಅಂತರ ಕಾಪಾಡುವ ಭರವಸೆಯೊಂದಿಗೆ ವ್ಯಾಪಾರ, ವಹಿವಾಟು ಆರಂಭಗೊಂಡಿದೆಯಾದರೂ ಇಂದಿನ ಮಾರುಕಟ್ಟೆ ಸ್ಥಿತಿ ಗಮನಿಸಿದ ಯಾರಿಗೆ ಆಗಲಿ ಸಾಮಾಜಿಕ ಅಂತರದ ಅರಿವೇ ಇಲ್ಲವೆನೋ ಎನ್ನುವಂತೆ ಜನತೆ  ನಡೆದುಕೊಳ್ಳುತ್ತಿರುವುದು ಸಾಮಾನ್ಯವಾಗಿತ್ತು. ವ್ಯಾಪಾರ, ವಹಿವಾಟುಗಳಿಗಾಗಿ ಆಗಮಿಸಿದ್ದ ಜನಸಾಮಾನ್ಯರು ಖರೀದಿಗಾಗಿ ಮುಗಿ ಬಿದ್ದಿದ್ದರು. ನಗರಸಭೆ ಕೂಡ ಮಾಸ್ಕ್ ಧರಿಸದೇ ಓಡಾಡುವವರಿಗೆ, ಸಾರ್ವಜನಿಕ ಸ್ಥಳದಲ್ಲಿ ಉಗಿಯುವವರಿಗೆ ದಂಡ ವಿಧಿಸುವ ಕ್ರಮಕ್ಕೆ ಮುಂದಾಗಿದ್ದರೂ  ಬಹುತೇಕ ಜನತೆ ಅದಕ್ಕೆ ಕ್ಯಾರೇ ಎನ್ನುತ್ತಿಲ್ಲವಲ್ಲ ಎನ್ನುವುದಕ್ಕೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಸ್ಥಿತಿ ಮುಖ ಸಾಕ್ಷಿಯಾಗಿತ್ತು. 

ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಲ್ಲಿ ಜನತೆ ವಿಫಲವಾದಲ್ಲಿ ಭವಿಷ್ಯದಲ್ಲಿ ಜನತೆ ಮತ್ತೆ ಕಠಿಣ ಕ್ರಮಗಳಿಗೆ ಒಳಗಾಗಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಜಿಲ್ಲಾಡಳಿತ ನೀಡಿವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇಷ್ಟರ ಮಧ್ಯೆ ಜಿಲ್ಲೆಯಲ್ಲಿ  ಕೊರೋನಾ ಭೀತಿ ಇನ್ನೂ ತಪ್ಪಿಲ್ಲ ಎನ್ನುವುದು ಗಮನಾರ್ಹ. ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಕೊರೋನಾ ಗೋಜು ಇಲ್ಲದ ಚಾಲುಕ್ಯರ ನಾಡು ಬಾದಾಮಿಯಲ್ಲಿ ಗರ್ಭಿಣಿ ಮಹಿಳೆಯೊಬ್ಬರಲ್ಲಿ ಸೋಂಕು ಕಾಣಿಸಿಕೊಳ್ಳುವ ಮೂಲಕ ಜಿಲ್ಲೆಯಲ್ಲಷ್ಟೆ ಅಲ್ಲ ಅಕ್ಕಪಕ್ಕದ  ಕೊಪ್ಪಳ ಮತ್ತು ಧಾರವಾಡ ಜಿಲ್ಲೆಯನ್ನು ನಡುಗಿಸಿ ಬಿಟ್ಟಿದೆ.

ಬಾದಾಮಿ ತಾಲೂಕಿನ ಢಾಣಕಶಿರೂರಿನಲ್ಲಿ ಗರ್ಭಿಣಿ ಮಹಿಳೆಯಿಂದಾಗಿ ಒಟ್ಟು ಜನರಲ್ಲಿ ಸೋಂಕು ದೃಢಪಟ್ಟಿದೆ. ಹಾಗೆ ಯುವತಿಯೊಬ್ಬಳಿಂದಾಗಿ ಬಾದಾಮಿ ಪಟ್ಟಣದಲ್ಲಿ ಕೊರೋನಾ ತನ್ನ ವ್ಯಾಪ್ತಿಗೆ ಮಿತಿಯಿಲ್ಲ ಎನ್ನುವುದನ್ನು ತೋರ್ಪಡಿಸಿದೆ. ಇದುವರೆಗೂ ಯುವತಿಯ ಸೋಂಕಿನ ಮೂಲ  ಪತ್ತೆ ಆಗಿಲ್ಲ. ಜತೆಗೆ ಢಾಣಕಶಿರೂರನಲ್ಲೇ ನಡೆದ ಮದುವೆಯೊಂದಲ್ಲಿ ಕೊಪ್ಪಳ ಜಿಲ್ಲೆಯ ೧೨ ಜನ ಭಾಗಹಿಸುವ ಮೂಲಕ ಅಲ್ಲಿಗೂ ಅದು ವ್ಯಾಪಿಸುವಂತಾಗಿದೆ. ಈಗಾಗಲೇ ಜಿಲ್ಲೆಯ ಬಾಗಲಕೋಟೆ ಪಟ್ಟಣ, ಮುಧೋಳ ಮತ್ತು ಜಮಖಂಡಿಯಲ್ಲಿ ..... ಜನರಲ್ಲಿ ಸೋಂಕು ದೃಢಪಟ್ಟಿದ್ದು,  ಇನ್ನಷ್ಟು ಜನರ ವರದಿ ಬರಬೇಕಿದೆ. ಏತನ್ಮಧ್ಯೆ ಬಾಗಲಕೋಟೆಯಲ್ಲಿ ವ್ಯಾಪಾರು, ವಹಿವಾಟು ಎಂದಿನಂತೆ ಆರಂಭಗೊಂಡಿವೆ. ಅಪಾಯವನ್ನು ಎದುರು ಹಾಕಿಕೊಂಡು ಹೆಜ್ಜೆ ಇಟ್ಟಿರುವ ಜನತೆ ಎಷ್ಟರ ಮಟ್ಟಿಗೆ ಸ್ವಯಂ ಶಿಸ್ತಿಗೆ ಒಳಪಡಲಿದ್ದಾರೆ ಎನ್ನುವುದರ ಮೇಲೆ ಪರಿಣಾಮಗಳು  ನಿರ್ಧಾರವಾಗಲಿವೆ.

- ವಿಠ್ಠಲ ಆರ್. ಬಲಕುಂದಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT