ರಾಜ್ಯ

ಖಾಸಗಿ ಅನುದಾನರಹಿತ ಶಿಕ್ಷಕರಿಗೂ ವಿಶೇಷ ಪ್ಯಾಕೇಜ್ ಘೋಷಿಸಿ: ಎಚ್.ಡಿ.ದೇವೇಗೌಡ

Raghavendra Adiga

ಬೆಂಗಳೂರು: ಸರ್ಕಾರ ಅಸಂಘಟಿತ ವಲಯಕ್ಕೆ ಪ್ಯಾಕೇಜ್ ಘೋಷಣೆ ಮಾಡಿದಂತೆ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೂ ಕೂಡ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಆಗ್ರಹಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರಬರೆದಿರುವ ಎಚ್‌.ಡಿ.ದೇವೇಗೌಡ, ಸರ್ಕಾರದಿಂದ ಅಸಂಘಟಿತ ವಲಯದ ಕಾರ್ಮಿಕರಿಗೆ ಪ್ಯಾಕೇಜ್ ಘೋಷಣೆ ಮಾಡಿದ್ದು ಅಭಿನಂದನಾರ್ಹ. ಇದೇ ರೀತಿ ಲಾಕ್ ಡೌನ್ ಘೋಷಣೆ ಪರಿಣಾಮವಾಗಿ ಖಾಸಗಿ ವಲಯದಲ್ಲಿ ವೃತ್ತಿ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಅಪಾರ ಆರ್ಥಿಕ ತೊಂದರೆಯುಂಟಾಗಿದೆ. ಶೈಕ್ಷಣಿಕ ಉನ್ನತಿಗಾಗಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರ ಕೊಡುಗೆ ಅಪಾರ. ಲಾಕ್ ಡೌನ್ ಆದ ನಂತರ ಶಿಕ್ಷಣ ಸಂಸ್ಥೆಗಳು ಎರಡು ತಿಂಗಳಿನಿಂದ ಆರ್ಥಿಕ ಹೊರೆಯಿಂದಾಗಿ ಶಿಕ್ಷಕರಿಗೆ ಸಂಬಳ ನೀಡಲು ತೊಂದರೆಯಾಗಿದೆ. ಖಾಸಗಿ ಅನುದಾನರಹಿತ ಆಡಳಿತ ಮಂಡಳಿಗೆ ಶಿಕ್ಷಣ ಇಲಾಖೆ ಆರ್‌ಟಿಇ ಬಾಕಿಯನ್ನೂ ಪಾವತಿಸದೆ ಇರುವ ಕಾರಣಕ್ಕೆ ಶಿಕ್ಷಕರ ವೇತನ ನೀಡಲು ಸಾಧ್ಯವಾಗಿಲ್ಲ. ಶಿಕ್ಷಕರ ಪ್ರಸ್ತುತ ಆರ್ಥಿಕ ತೊಂದರೆ ನೀಗಿಸಲು ಸರ್ಕಾರ ಕೂಡಲೇ 1300 ಕೋಟಿ ರೂ. ಆರ್‌ಟಿಇ ಬಾಕಿಯನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಖಾಸಗಿ ಅನುದಾನರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳು ಅನುಭವಿಸುತ್ತಿರುವ ಆರ್ಥಿಕ ಹೊರೆಯನ್ನು ಸರ್ಕಾರ ಆರ್ಥಿಕ ನೆರವು ಘೋಷಣೆ ಮಾಡುವ ಮೂಲಕ ಇಳಿಸಿದರೆ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿರುವ ಅವರ ಸೇವೆಗೆ ಉತ್ತೇಜನ ನೀಡಿದಂತಾಗುತ್ತದೆ. ಕೂಡಲೇ ಮುಖ್ಯಮಂತ್ರಿಗಳು ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಸಮಾಲೋಚನೆ ನಡೆಸಿ ಶಿಕ್ಷಕರ ಹಿತ ಕಾಯುವಂತೆ ಪತ್ರ ಮೂಲಕ ದೇವೇಗೌಡ ಮನವಿ ಮಾಡಿದ್ದಾರೆ.

SCROLL FOR NEXT