ರಾಜ್ಯ

ಬಿಬಿಎಂಪಿ ಸದಸ್ಯೆಯ ಪತಿ ಮೇಲೆ ಸಗಣಿ ಎರಚಿದ ಕಿಡಿಗೇಡಿಗಳು

Srinivasamurthy VN

ಬೆಂಗಳೂರು: ಬಿಬಿಎಂಪಿ ಸದಸ್ಯೆಯ ಪತಿ ಮತ್ತು ಮಗನ ಮೇಲೆ ಕೆಲ ಕಿಡಿಗೇಡಿಗಳು ಸಗಣಿ ಎರಚಿರುವ ಘಟನೆ ನಗರದ ಕಲಾಸಿಪಾಳ್ಯದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

ಕಲಾಸಿಪಾಳ್ಯ ವಾರ್ಡ್ ಸದಸ್ಯೆ ಪ್ರತಿಭಾ ಧನರಾಜ್ ಅವರ ಪತಿ ಧನರಾಜ್ ಮತ್ತು ಪುತ್ರನ ಮೇಲೆ ಸಗಣಿ ಎರಚಲಾಗಿದ್ದು, ಕಿಡಿಗೇಡಿಗಳು ಮೊದಲೇ ಸಗಣಿ ಪ್ಯಾಕೆಟ್ ತಯಾರಿಸಿಕೊಂಡಿದ್ದರು‌ ಎಂದು ಆರೋಪಿಸಲಾಗಿದೆ. ಕಲಾಸಿಪಾಳ್ಯದಲ್ಲಿ ಅಕ್ರಮವಾಗಿ ಅಂಗಡಿಗಳನ್ನು ಹಾಕಲಾಗಿದೆ  ಎಂಬ ಕಾರಣಕ್ಕೆ ಬಿಬಿಎಂಪಿ ಅಧಿಕಾರಿಗಳ ಜೊತೆ ಧನರಾಜ್ ತಪಾಸಣೆ‌ ನಡೆಸುತ್ತಿದ್ದಾಗ ಈ ವೇಳೆ ಘಟನೆ ನಡೆದಿದೆ.

ಧನರಾಜ್ ಅವರು ವಾರ್ಡ್ ಸದಸ್ಯರಲ್ಲ. ಹೀಗಿರುವಾಗ ಅವರೇಕೆ ತಪಾಸಣೆ ಮಾಡಲು ಬರಬೇಕು? ಅವರಿಗೇನು ಅಧಿಕಾರವಿದೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಸಗಣಿ ಎಸೆದ ಕಾರಣಕ್ಕೆ ಪಾಲಿಕೆ ಸದಸ್ಯೆ ಪ್ರತಿಭಾ ಹಾಗೂ ಅವರ ಬೆಂಬಲಿಗರು ಕಲಾಸಿಪಾಳ್ಯ ರಸ್ತೆಯಲ್ಲಿ‌ ಕುಳಿತು  ಪ್ರತಿಭಟನೆ ನಡೆಸಿದ್ದಾರೆ.

ಇನ್ನು, ಇದೇ ವೇಳೆ ಗುಂಪೊಂದು ಧನರಾಜ್ ವಿರುದ್ಧ ಧಿಕ್ಕಾರ ಕೂಗುತ್ತಾ ಬಂದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪ್ರತಿಭಟನಕಾರರನ್ನು ನಿಯಂತ್ರಿಸಲು ಕಲಾಸಿಪಾಳ್ಯ ಠಾಣೆಯ ಪೊಲೀಸರು ಹರಸಾಹಸ ಪಡಬೇಕಾಯಿತು. ಬಳಿಕ ಪೊಲೀಸರು ಎಲ್ಲರನ್ನೂ  ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

SCROLL FOR NEXT