ರಾಜ್ಯ

ಐಎಎಸ್ ಅಧಿಕಾರಿ ಮಣಿವಣ್ಣನ್ ಗೆ ಪಶು ಸಂಗೋಪನೆ ಇಲಾಖೆ ಕಾರ್ಯದರ್ಶಿ ಹುದ್ದೆ;ದಿಢೀರ್ ವರ್ಗಾವಣೆಗೆ ಕಾರಣ ಏನು?

Sumana Upadhyaya

ಬೆಂಗಳೂರು: ಕಾರ್ಮಿಕ ಇಲಾಖೆಯಿಂದ ವರ್ಗಾವಣೆಗೊಂಡಿದ್ದ ಹಿರಿಯ ಐಎಎಸ್ ಅಧಿಕಾರಿ ಪಿ ಮಣಿವಣ್ಣನ್ ಅವರಿಗೆ ಮೀನುಗಾರಿಕೆ ಮತ್ತು ಪಶು ಸಂಗೋಪನೆ ಇಲಾಖೆಯ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ. ಅವರನ್ನು ಎರಡು ದಿನಗಳ ಹಿಂದೆ ಕಾರ್ಮಿಕ ಮತ್ತು ಮಾಹಿತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ದಿಢೀರ್ ವರ್ಗಾವಣೆ ಮಾಡಲಾಗಿತ್ತು.

ಕಳೆದ ಸೋಮವಾರ ಸಾಯಂಕಾಲ ಮಣಿವಣ್ಣನ್ ಅವರನ್ನು ಕಾರ್ಮಿಕ ಇಲಾಖೆಯಿಂದ ಡಿಢೀರ್ ವರ್ಗಾವಣೆ ಮಾಡಿದ್ದು ಯಡಿಯೂರಪ್ಪ ಸರ್ಕಾರದ ವಿರುದ್ಧ ಸೋಷಿಯಲ್ ಮೀಡಿಯಾಗಳಲ್ಲಿ ಟೀಕೆಗಳು ವ್ಯಕ್ತವಾಗಿದ್ದವು. ಅವರನ್ನು ಮತ್ತೆ ಕಾರ್ಮಿಕ ಇಲಾಖೆಗೆ ಕರೆತನ್ನಿ ಎಂದು ಅವರ ಅಭಿಮಾನಿಗಳು ಒತ್ತಾಯಿಸಿದ್ದರು.

ಮಣಿವಣ್ಣನ್ ಅವರ ದಿಢೀರ್ ವರ್ಗಾವಣೆಗೆ ಸರಿಯಾದ ಕಾರಣ ನೀಡದ ಹಿನ್ನೆಲೆಯಲ್ಲಿ ಸರ್ಕಾರದ ಬಗ್ಗೆ ತೀವ್ರ ಊಹಾಪೋಹಗಳು ವ್ಯಕ್ತವಾಗಿದ್ದವು.

ದಿಢೀರ್ ವರ್ಗಾವಣೆಗೆ ಕಾರಣವೇನು?: ಕೋವಿಡ್ ಪರಿಹಾರಕ್ಕೆ ಸಹಾಯವಾಣಿಗೆ ಟೆಂಡರ್ ಕರೆಯದೆ 10 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಮಣಿವಣ್ಣನ್ ತಮಗೆ ಬೇಕಾದವರಿಗೆ ನೀಡಿದ್ದರು ಎಂಬ ಆರೋಪವಿದೆ. ಕಾರ್ಮಿಕ ಇಲಾಖೆ ಮೂಲಗಳು ಈ ಆರೋಪವನ್ನು ತಳ್ಳಿಹಾಕಿವೆ. ಮೂಲಭೂತ ಸೌಕರ್ಯ ಒದಗಿಸಿದ ಕಂಪೆನಿಗೆ ಕೋವಿಡ್ ಪರಿಹಾರ ಸಹಾಯವಾಣಿಯ ಗುತ್ತಿಗೆ ನೀಡಲಾಗಿದೆ. ಸಮಯ ಕಡಿಮೆಯಿದ್ದರಿಂದ ಔಪಚಾರಿಕವಾಗಿ ಗುತ್ತಿಗೆಯನ್ನು ನೀಡಲು ಸಾಧ್ಯವಾಗಿರಲಿಲ್ಲ.ಗುತ್ತಿಗೆ ಪಡೆದ ವ್ಯಕ್ತಿ ಮಣಿವಣ್ಣನ್ ಅವರ ಸ್ನೇಹಿತರಲ್ಲ ಎಂದು ಇಲಾಖೆಯ ಅಧಿಕಾರಿ ಹೇಳುತ್ತಾರೆ.

ಕೋವಿಡ್-19ನ ಲಾಕ್ ಡೌನ್ ಮಧ್ಯೆ ಮಣಿವಣ್ಣನ್ ಅವರು ಕಾರ್ಮಿಕರ ಪರವಾಗಿ ಮುಕ್ತವಾಗಿ ಮಾತನಾಡಿದ್ದರು. ಉತ್ತರ ಪ್ರದೇಶ ಸರ್ಕಾರ ಮಾದರಿಯಲ್ಲಿ ಕರ್ನಾಟಕ ಸರ್ಕಾರ ಕೂಡ ಕಾರ್ಮಿಕ ಕಾನೂನನ್ನು ಮುಂದಿನ ಮೂರು ವರ್ಷಗಳಿಗೆ ರದ್ದುಪಡಿಸಲು ಮುಂದಾಗಿದೆ ಎಂದು ವರದಿಯಾಗಿತ್ತು. ಮಣಿವಣ್ಣನ್ ಇದಕ್ಕೆ ವಿರುದ್ಧವಾಗಿದ್ದರು ಎಂದು ಮೂಲಗಳು ಹೇಳುತ್ತವೆ.

ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಈ ಆರೋಪಗಳನ್ನು ತಳ್ಳಿಹಾಕುತ್ತಾರೆ. ವರ್ಗಾವಣೆ ಸರ್ಕಾರದಲ್ಲಿ ನಡೆಯುತ್ತಿರುತ್ತದೆ. ಅಧಿಕಾರಿಗಳು ಬರುತ್ತಾರೆ, ಹೋಗುತ್ತಾರೆ. ಅದಕ್ಕೆ ಸರ್ಕಾರವನ್ನು ದೂರುವುದರಲ್ಲಿ, ಇದರ ಹಿಂದೆ ಲಾಬಿಯಿದೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಅವರ ವರ್ಗಾವಣೆಯಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದರು.

SCROLL FOR NEXT