ರಾಜ್ಯ

ಶಿವಮೊಗ್ಗದ ಉಗ್ರನ ಪತ್ತೆಗೆ 3 ಲಕ್ಷ ರೂ. ಇನಾಮು ಘೋಷಿಸಿದ ಎನ್.ಐ.ಎ

Nagaraja AB

ಬೆಂಗಳೂರು: ಅಲ್- ಹಿಂದೂ ಐಎಸ್ ಐಎಸ್ ಬೆಂಗಳೂರು ಮಾಡ್ಯೂಲ್ ಪ್ರಕರಣದಲ್ಲಿ ಬೇಕಾಗಿರುವ ಶಿವಮೊಗ್ಗದ ನಿವಾಸಿ ಅಬ್ದುಲ್ ಮಥೀನ್ ಅಹ್ಮದ್ ತಹಾ ಬಂಧನಕ್ಕೆ ಬಲೆ ಬೀಸಿರುವ ಪೊಲೀಸರು ಆತನ ಬಗ್ಗೆ ವಿಶ್ವಾಸಾರ್ಹ ಮಾಹಿತಿ ನೀಡಿದವರಿಗೆ 3 ಲಕ್ಷ ರೂ. ಬಹುಮಾನವನ್ನು ಘೋಷಿಸಿದ್ದಾರೆ.

ತಮಿಳುನಾಡಿನ ಹಿಂದೂ ನಾಯಕನ ಹತ್ಯೆ ಹಿಂದೆ ಐಎಸ್ ಐಎಸ್ ಉಗ್ರ ಸಂಘಟನೆ ಕೈವಾಡವಿದೆ. ತಹಾ ಆರೋಪಿಯ ಸ್ನೇಹಿತನಾಗಿದ್ದಾನೆ ಎಂದು ಎನ್ ಐಎ ವಕ್ತಾರರು ತಿಳಿಸಿದ್ದಾರೆ. 

ಹಿಂದೂ ನಾಯಕನ ಹತ್ಯೆಯಲ್ಲಿ ಮೆಹಬೂಬಾ ಪಾಶ, ಖಾಜಾ ಮೊಹಿದ್ದೀನ್ ಅಲಿಯಾಸ್ ಜಲಾಲ್ ಮತ್ತು ಅವರ ಆಪ್ತರು ರೂಪಿಸಿರುವ ಐಎಸ್ ಐಎಸ್ ಪ್ರೇರಿತ ಉಗ್ರ ಸಂಘಟನೆ ಭಾಗಿಯಾಗಿದೆ ಎಂದು ಅವರು ಹೇಳಿದ್ದಾರೆ. 

ಹತ್ಯೆ ಸಂಚು ರೂಪಿಸಲು ಪಾಶ 2019ರಲ್ಲಿ ಬೆಂಗಳೂರಿನ ಗುರಪ್ಪನಪಾಳ್ಯದ ತನ್ನ ನಿವಾಸದಲ್ಲಿ ಹಲವು ಸಭೆಗಳನ್ನು ನಡೆಸಿದ್ದ. ಅಪ್ಘಾನಿಸ್ತಾನ ಹಾಗೂ ಸಿರಿಯಾದಲ್ಲಿನ ನಿಷೇಧಿತ ಜಿಹಾದಿ ಸಂಘಟನೆಗಳನ್ನು ಸೇರಿದ ಈತ ಉಗ್ರ ಚಟುವಟಿಕೆಗಳನ್ನು ನಡೆಸಲು ಇತರ ಆರೋಪಿಗಳನ್ನು ನೇಮಕ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಐಎಸ್ ಐಎಸ್ ಬೆಂಗಳೂರು ಮಾಡ್ಯೂಲ್ ಪ್ರಕರಣದಲ್ಲಿ 12 ಮಂದಿಯನ್ನು ಬಂಧಿಸಲಾಗಿದೆ.  ತಹಾ ಮೆಹಬೂಬಾ ಪಾಶಾನ ಸಂಪರ್ಕದಲ್ಲಿದ್ದ ಅಲ್ಲದೇ, ಆನ್ ಲೈನ್ ನಲ್ಲಿ ವಿದೇಶದಿಂದ ನಿರ್ವಹಣೆ ಮಾಡುತ್ತಿದ್ದವರೊಂದಿಗೆ ಸಂಬಂಧ ಹೊಂದಿದ್ದ ಎಂದು ಎನ್ ಐಎ ವಕ್ತಾರರು ಹೇಳಿದ್ದಾರೆ. 

ಪ್ರಚೋದನಾಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಮೀನು ಮಾರ್ಕೆಟ್ ರಸ್ತೆ ನಿವಾಸಿಯಾಗಿರುವ ತಹಾ ವಿರುದ್ಧ ಜನವರಿ 10 ರಂದು ಬೆಂಗಳೂರಿನ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಎನ್ ಐಎ ಪೊಲೀಸರು ಎಫ್ ಐಆರ್ ದಾಖಲಿಸಿದ್ದರು. 

SCROLL FOR NEXT