ರಾಜ್ಯ

ಸಿಲಿಕಾನ್ ಸಿಟಿಯ ಹಲವೆಡೆ ಕೇಳಿಸಿದ ಭಯಾನಕ ಶಬ್ಧ: ಭೂಕಂಪನ ಅಲ್ಲ ಎಂದ ತಜ್ಞರು!

Srinivasamurthy VN

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ಇಂದು ಮಧ್ಯಾಹ್ನ ಭಯಾನಕ ಶಬ್ಧ ಕೇಳಿಸಿದ್ದು, ಭೂಕಂಪನ ಎಂದು ತಿಳಿದ ಜನತ ಬೆಚ್ಚಿ ಬಿದ್ದಿದ್ದಾರೆ. ಕೆಲ ಹೊತ್ತು ಭಯದಿಂದ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.

ಹೌದು ಮಧ್ಯಾಹ್ನ ಸುಮಾರು 1.45ರ ಸುಮಾರಿಗೆ ಸ್ಪೋಟದಂತಹ ಈ ಶಬ್ಧ ಬೆಂಗಳೂರಿನ ಬಹುತೇಕ ಕಡೆ ಕೇಳಿ ಬಂದಿದೆ. ಸರ್ಜಾಪುರ, ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ಮಾರತ್‌ ಹಳ್ಳಿ, ಇಂಧಿರಾನಗರ, ಹೆಬ್ಬಾಳ, ಜೆ. ಪಿ. ನಗರ, ಕೆ. ಆರ್‌ ಪುರಂ ಸೇರಿದಂತೆ ಅನೇಕ ಕಡೆ ಈ ಸದ್ದು  ಜನರ ನಿದ್ದೆಗೆಡಿಸಿದೆ. ಅನೇಕ ಮಂದಿ ಇದು ಭೂಕಂಪನ ಎಂದು ತಿಳಿದು ಆತಂಕಗೊಂಡರೆ ಮತ್ತೆ ಕೆಲವರು ಇದು HALನಲ್ಲಿರುವ ಯುದ್ಧ ವಿಮಾನ ಮಿರಾಜ್ 2000 ಹಾರಾಟ ಮಾಡುವಾಗ ಕೇಳಿ ಬಂದ ಶಬ್ಧವಾಗಿರಬಹುದು ಎಂದು ಊಹಿಸಿದ್ದಾರೆ.

ಇನ್ನು ಇದೇ ವಿಚಾರವಾಗಿ ಸ್ಪಷ್ಟನೆ ನೀಡಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ವೀಕ್ಷಣಾ ಕೇಂದ್ರ (Karnataka State Natural Disaster Monitoring Centre (KSNDMC)) ಅಧಿಕಾರಿಗಳು ಭಯ ಬೇಡ ಬೆಂಗಳೂರಿನಲ್ಲಿ ಯಾವುದೇ ಭೂಕಂಪ ಸಂಭವಿಸಿಲ್ಲ ಎಂದು  ಹೇಳಿದ್ದಾರೆ. ಹವಾಮಾನ ಬದಲಾವಣೆಯಿಂದ ಶಬ್ದ ಕೇಳಿಸುತ್ತದೆ. ಭೂಗರ್ಭದಲ್ಲಿ ಯಾವುದೇ ಕಂಪನ ಆಗಿಲ್ಲ. ಚಂಡಮಾರುತ ಚಲನೆ ಆದಾಗ ಹವಾಮಾನ ಬದಲಾವಣೆಯಾಗುತ್ತದೆ. ಹವಾಮಾನ ಬದಲಾವಣೆ ವೇಳೆ ಬಿಸಿಗಾಳಿ ಚಲನೆಯಾಗುತ್ತದೆ. ಬಿಸಿಗಾಳಿ ಚಲನೆಯಾದಾಗ ಸ್ಫೋಟ  ಶಬ್ಧ ಕೇಳಿಸುತ್ತದೆ. ಅಂಫಾನ್​ ಚಂಡಮಾರುತದಿಂದ ಹವಾಮಾನ ಬದಲಾವಣೆಯಾಗಿರಬಹುದು. ಹೆಚ್ಚಿನ ಒತ್ತಡ, ಬಿಸಿ ಗಾಳಿಯ ಘರ್ಷಣೆಯಿಂದ ಶಬ್ಧ ಉಂಟಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಈ ಕುರಿತಂತೆ KSNDMC ಸರಣಿ ಟ್ವೀಟ್ ಮಾಡಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿರುವ KSNDMC ನಿರ್ದೇಶಕರು ಶ್ರೀನಿವಾಸರೆಡ್ಡಿ ಅವರು, 'ಬೆಂಗಳೂರುನಗರ ಪ್ರದೇಶದಲ್ಲಿ ಯಾವುದೇ ಭೂಕಂಪನ/ಭೂಮಿ ನಡುಗಿದ ಬಗ್ಗೆ ವರದಿಯಾದ ಮಾಹಿತಿಯು ಭೂಕಂಪನಕ್ಕೆ  ಸಂಭಂದಿಸಿರುವುದಿಲ್ಲ ಹಾಗೂ ಭೂಕಂಪನ ಚಟುವಟಿಕೆಯು ಒಂದು ಪ್ರದೇಶಕ್ಕೆ ಸೀಮಿತವಾಗಿರದೇ ವ್ಯಾಪಕವಾಗಿರುತ್ತದೆ. ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಭೂಕಂಪನಮಾಪನ ಕೇಂದ್ರಗಳಲ್ಲಿ ಈ ಬಗ್ಗೆ ದಾಖಲಾಗಿರುವುದಿಲ್ಲ ಎಂದು ಹೇಳಿದ್ದಾರೆ.

SCROLL FOR NEXT