ರಾಜ್ಯ

ಮುಜರಾಯಿ ದೇವಾಲಯಗಳ ಅರ್ಚಕರಿಗೆ ಪರಿಹಾರ ಕೋರಿ ಅರ್ಜಿ; ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

Raghavendra Adiga

ಬೆಂಗಳೂರು: ರಾಜ್ಯದ ಸಿ ವರ್ಗದ ಮುಜುರಾಯಿ ದೇವಾಲಯಗಳ ಅರ್ಚಕರಿಗೆ ಆರ್ಥಿಕ ಪರಿಹಾರ ಘೋಷಿಸಲು ಸರ್ಕಾರಕ್ಕೆ ನಿರ್ದೇಶನ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕ-ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ, ಈ ಸಂಬಂಧ ತಮ್ಮ ನಿಲುವು ತಿಳಿಸುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿದೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಜರಾಯಿ ದೇವಾಲಯಗಳ 35 ಸಾವಿರಕ್ಕೂ ಹೆಚ್ಚು ಅರ್ಚಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ, ಅರ್ಚಕರ ನಿತ್ಯ ಜೀವನ ನಿರ್ವಹಣೆಗೆ ತುಂಬಾ ತೊಂದರೆಯಾಗಿದೆ. ಅರ್ಚಕರಿಗೆ ಪರಿಹಾರ ನೀಡುವಂತೆ ಏಪ್ರಿಲ್ 2ರಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಅದನ್ನು ಪರಿಗಣಿಸಿಲ್ಲ. ಕಟ್ಟಡ ಕಾರ್ಮಿಕರು, ನೇಕಾರರು, ಆಟೊ ರಿಕ್ಷಾ ಚಾಲಕರು, ಕ್ಷೌರಿಕರಿಗೆ ಪರಿಹಾರ ನೀಡಿದ ಮಾದರಿಯಲ್ಲೇ ಅರ್ಚಕರಿಗೂ ಪ್ಯಾಕೇಜ್ ಘೋಷಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

SCROLL FOR NEXT