ರಾಜ್ಯ

ಕೊರೋನಾ ಲಾಕ್ ಡೌನ್ ಎಫೆಕ್ಟ್ :ಜೀವನ ನಿರ್ವಹಣೆ ಸಂಕಷ್ಟದಲ್ಲಿ ಗದಗದ ನೇಯ್ಗೆಗಾರರ ಕುಟುಂಬ

Sumana Upadhyaya

ಗದಗ:ದಶಕಗಳಿಂದ ಚರಕದಿಂದ ನೂಲು ತೆಗೆಯುತ್ತಾ ಸಾಂಪ್ರದಾಯಿಕ ವೃತ್ತಿಯನ್ನು ಗೌರವದಿಂದ ನಡೆಸಿಕೊಂಡು ಬರುವವರು ಇಲ್ಲಿ ಸಾಕಷ್ಟು ಮಂದಿ ಇದ್ದಾರೆ. ಈ ನೇಕಾರರ ಚರಕದಿಂದ ಉತ್ಪಾದಿಸುವ ಎಳೆಗಳು ರುದ್ರಾಕ್ಷಿ ಮಾಲೆಗಳು, ತಾಲಿಗಳು, ಜಪಮಾಲೆಗಳು ಮತ್ತು ಇತರ ಧಾರ್ಮಿಕ ವಸ್ತುಗಳಲ್ಲಿ ಮಣಿಗಳನ್ನು ಕಟ್ಟಲು ಸಹಾಯವಾಗುತ್ತದೆ.

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಂತೆ ಗದಗ ಜಿಲ್ಲೆ ಕೂಡ ತೋಂಟದಾರ್ಯ ಮಠದ ಜಾತ್ರೆ ಸೇರಿದಂತೆ ಜಾತ್ರೆಗಳು, ಉತ್ಸವಕ್ಕೆ ಹೆಸರುವಾಸಿ. ಆದರೆ ಈ ವರ್ಷ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಜಾತ್ರೆ, ಉತ್ಸವ ನಡೆಸಬಾರದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜನದಟ್ಟಣೆ ಸೇರಬಾರದು ಎಂದು ನಿರ್ಬಂಧ ಹಾಕಿರುವುದರಿಂದ ಜಿಲ್ಲೆಯ ಹಲವು ಸಾಂಪ್ರದಾಯಿಕ ಕೆಲಸಗಳನ್ನು ಮಾಡಿ ಜೀವನ ಸಾಗಿಸುವವರಿಗೆ ತೀವ್ರ ತೊಂದರೆಯಾಗಿದೆ. ಉಳಿದ ಸಮಯಗಳಲ್ಲಾದರೆ ಈ ನೇಯ್ಗೆಗಾರರಿಗೆ ಸುಗ್ಗಿಯ ಸಮಯ, ಸಾಮಾಜಿಕ-ಧಾರ್ಮಿಕ ಕಾರ್ಯಕ್ರಮಗಳಲ್ಲಿ ಇವರಿಗೆ ಪ್ರಾಶಸ್ತ್ಯ. ಆದರೆ ಇವರ ಭವಿಷ್ಯ ಈಗ ತೂಗುಯ್ಯಾಲೆಯಾಗಿದೆ.

ಚರಕದಿಂದ ನೂಲು ತೆಗೆಯುವ ಕಾಯಕದಲ್ಲಿ ಕಳೆದ 5 ದಶಕಗಳಿಂದ ತೊಡಗಿರುವ ನಾಗರಾಜ್ ಬಣ್ಣದಬಾವಿ(75ವ), ನಮಗೆ ಚರಕದಿಂದ ನೂಲು ತೆಗೆಯುವ ಕೆಲಸ ಮಾತ್ರ ಗೊತ್ತಿದೆ. ನಮ್ಮ ಕುಟುಂಬದ ಮುಖ್ಯ ಆದಾಯವೇ ಅದು. ಈಗ ನನ್ನ ಮಗ ವಸ್ತುಗಳನ್ನು ಸಂಗ್ರಹಿಸಿ ಜಾತ್ರೆಗಳಿಗೆ ನೂಲು ಪೂರೈಕೆ ಮಾಡುತ್ತಿದ್ದಾನೆ. ಜಾತ್ರೆಗಳಲ್ಲಿಯೇ ನಮಗೆ ಮುಖ್ಯವಾಗಿ ವ್ಯಾಪಾರವಾಗುವುದು ಎನ್ನುತ್ತಾರೆ.

ಈ ವರ್ಷ 12 ಸಾವಿರ ರೂಪಾಯಿಯಲ್ಲಿ ಹಲವು ವಸ್ತುಗಳನ್ನು ತಂದು ಕೆಲಸ ಆರಂಭಿಸಿದ್ದರಂತೆ. ಆ ಹೊತ್ತಿಗೆ ಲಾಕ್ ಡೌನ್ ಘೋಷಣೆಯಾಗಿ ನಮ್ಮ ಆದಾಯಕ್ಕೆ ಪೆಟ್ಟು ಬಿತ್ತು. ಸರ್ಕಾರ ಕೊಡುವ ರೇಷನ್ ನಂಬಿಕೊಂಡು ಎಷ್ಟು ದಿನ ಜೀವನ ನಡೆಸಬಹುದು ಎಂದು ಬಣ್ಣದಬಾವಿ ಕೇಳುತ್ತಾರೆ.

1990ರ ದಶಕದಲ್ಲಿ ಆಧುನೀಕತೆ ಆರಂಭವಾದಾಗ ನೇಯ್ಗೆಗಾರರ ಕುಟುಂಬದ ಆದಾಯಕ್ಕೆ ಪೆಟ್ಟು ಬೀಳಲಾರಂಭಿಸಿತು. ಜಾತ್ರೆಗಳಿಗೆ ಸಿದ್ದ ನೂಲುಗಳು ಲಗ್ಗೆಯಿಡಲಾರಂಭಿಸಿದವು. ಆದರೆ ಸಾಂಪ್ರದಾಯಿಕ ನೂಲುಗಳ ಗುಣಮಟ್ಟ ಮತ್ತು ಶುದ್ಧತೆ ಜನರ ಹೃದಯಕ್ಕೆ ಹತ್ತಿರವಾಗಿ ಭಕ್ತರು ಜಾತ್ರೆಗಳಲ್ಲಿ ಶುದ್ಧ ಸಾಂಪ್ರದಾಯಿಕ ನೂಲುಗಳನ್ನೇ ಕೊಂಡುಕೊಳ್ಳುತ್ತಿದ್ದರು.

SCROLL FOR NEXT