ರಾಜ್ಯ

ಭಾರೀ ಮಳೆ: ಹಲವೆಡೆ ಮನೆಗಳಿಗೆ ನುಗ್ಗಿದ ನೀರು; ಜೂನ್ 2ರವರೆಗೂ ಭಾರೀ ಮಳೆ ಸಾಧ್ಯತೆ

Manjula VN

ಬೆಂಗಳೂರು: ನಗರದಲ್ಲಿ ನಿನ್ನೆ ಸುರಿದ ಭಾರೀ ಮಳೆಯಿಂದ ವಾಹನ ಮತ್ತು ಜನಸಂಚಾರಕ್ಕೆ ಅಡಚಣೆಯಾಗಿತ್ತು. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದರಿಂದ ತಗ್ಗು ಪ್ರದೇಶದ ಜನರು ರಾತ್ರಿ ಪೂರ್ತಿ ನಿದ್ರೆಯಿಲ್ಲದೆ ಕಳೆದಿದ್ದಾರೆ.

ಮೆಜೆಸ್ಟಿಕ್, ಕೆ. ಆರ್. ಮಾರ್ಕೆಟ್, ಓಕಳಿಪುರಂ, ಸುಬ್ರಹ್ಮಣ್ಯ ನಗರ ಸೇರಿ ಇನ್ನಿತರ ಭಾಗದಲ್ಲಿ ಭಾರಿ ಮಳೆಯಾಗಿದ್ದು, ತಗ್ಗು ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿತ್ತು. ನಗರದ ಕೆಲವೆಡೆ ಬೃಹತ್ ಮರಗಳು ಧರೆಗುರುಳಿದ್ದು, ಕಾರು, ಆಟೋ ಸೇರಿ ಇನ್ನಿತರ ವಾಹನಗಳು ಜಖಂಗೊಂಡಿವೆ.

ಬಿಇಎಲ್ ಸರ್ಕಲ್, ಹೆಬ್ಬಾಳ ಫ್ಲೈ ಓವರ್ ಕೂಡ ರಾತ್ರಿ ಜಲಾವೃತವಾಗಿತ್ತು. ರಸ್ತೆಗಳ ಜಲಾವೃತ ಹಿನ್ನೆಲೆ ವಾಹನ ಸವಾರರ ಪರದಾಡುವಂತಾಗಿತ್ತು.

ನಿನ್ನೆ ರಾತ್ರಿ ಹತ್ತು ಗಂಟೆವರೆಗೂ ಮಳೆ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುತ್ತಿದ್ದ ದೃಶ್ಯ ಕಂಡುಬಂತು. ಮಳೆ ಕಡಿಮೆಯಾಗುತ್ತಿದ್ದಂತೆ ಬೈಕ್‌ ಸವಾರರು ಮನೆ ಕಡೆಗೆ ತೆರಳಿದರು. ರಸ್ತೆ ಪೂರ್ತಿ ನೀರು ನಿಂತಿದ್ದರಿಂದ ಸವಾರರು ವಾಹನ ಚಲಾಯಿಸಲು ಪರದಾಡಿದರು. ನಗರ ಸೇರಿ ರಾಜ್ಯಾದ್ಯಂತ ಇನ್ನೂ ಮೂರು ದಿನಗಳ ಕಾಲ ಮಳೆಯ ಮುನ್ಸೂಚನೆಯನ್ನು ಇಲಾಖೆ ತಿಳಿಸಿದೆ. ಮಳೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

ನಿನ್ನೆ ರಾತ್ರಿ ಸುರಿದ ಮಳೆಗೆ ಮಲ್ಲೇಶ್ವರಂ ನ 17ನೇ ಕ್ರಾಸ್ ನಲ್ಲಿ ಕಾರು ಸೇರಿ ನಾಲ್ಕು ಅಂತಸ್ತಿನ ಕಟ್ಟಡಕ್ಕೆ ಹಾನಿಯಾಗಿದೆ. ಮರ ಉರುಳಿ ಬಿದ್ದಿದ್ದರಿಂದ ಎರ್ಟಿಗಾ ಕಾರೊಂದು ಸಂಪೂರ್ಣ ಜಖಂಗೊಂಡಿದೆ.

ನಾಲ್ಕು ಅಂತಸ್ತಿನ ಕಟ್ಟದ ಗೋಡೆ ಪುಡಿ ಪುಡಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಬಿದ್ದ ಮರವನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. 

ಶನಿವಾರ ಬೆಳಗ್ಗೆ ಕೂಡ ಮಳೆ ಮುಂದುವರಿದಿದ್ದು, ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ನಲುಗಿದ್ದ ನಗರದ ಜನತೆ ಇಂದು ಬೆಳಗ್ಗೆ ಕೂಡ ತತ್ತರಿಸುವಂತಾಗಿದೆ.

ಕಳೆದ ಮೂರ್ನಾಲ್ಕು ದಿನದಿಂದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಾತ್ರ ಮಳೆಯಾಗುತ್ತಿದೆ. ಆದರೆ, ಕರಾವಳಿ ಮಲೆನಾಡು ಜಿಲ್ಲೆಗಳಲ್ಲಿ ಮಳೆಯಾಗಿರಲಿಲ್ಲ. ಮುಂದಿನ ಎರಡು ದಿನಗಳಲ್ಲಿ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಮಳೆಯಾಗಲಿದೆ. ಮೇ 31ರ ನಂತರ ಉತ್ತರ ಒಳನಾಡಿನ ಹಲವೆಡೆ ಸಾಧಾರಣ ಮಳೆಯಾಗಲಿದೆ. ಬಂಗಾಳಕೊಲ್ಲಿಯಲ್ಲೂ ಮೇಲ್ಮೈ ಸುಳಿಗಾಳಿಯಿಂದಾಗಿ ಮಳೆಯಾಗಲಿದೆ. ನಿರೀಕ್ಷೆಗಿಂತ ಮೊದಲೇ ಜೂನ್ ಒಂದಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶವಾಗಲಿದೆ. ಇದಾದ ಒಂದೆರಡು ದಿನಗಳಲ್ಲಿ ಕರ್ನಾಟಕ ರಾಜ್ಯಕ್ಕೂ ಮುಂಗಾರು ಪ್ರವೇಶಿಸಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಶ್ರೀನಿವಾಸ ರೆಡ್ಡಿ ಹೇಳಿಕೆ ನೀಡಿದ್ದಾರೆ.

SCROLL FOR NEXT