ರಾಜ್ಯ

ವಿನಯ್ ಕುಲಕರ್ಣಿಯನ್ನು ಸಿಬಿಐ ಬಂಧನಕ್ಕೆ ತರುವಲ್ಲಿ ಯೋಗೀಶ್ ಗೌಡ ಕುಟುಂಬಸ್ಥರ 4 ವರ್ಷಗಳ ಕಾನೂನು ಹೋರಾಟ ಮಹತ್ವದ್ದು!

Sumana Upadhyaya

ಹುಬ್ಬಳ್ಳಿ: 2016ರಲ್ಲಿ ಬಿಜೆಪಿ ನಾಯಕ ಯೋಗೀಶ್ ಗೌಡ ಗೌಡರ್ ಅವರ ಹತ್ಯೆ ಪ್ರಕರಣಕ್ಕೆ ನಂತರ ಅವರ ಕುಟುಂಬಸ್ಥರ ಸುದೀರ್ಘ ನ್ಯಾಯಾಲಯ ಹೋರಾಟ ಇಂದು ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿಯನ್ನು ಬಂಧಿಸುವಲ್ಲಿಗೆ ಬಂದು ನಿಂತಿದೆ. 

ನಿನ್ನೆ ಸಿಬಿಐ ವಿನಯ್ ಕುಲಕರ್ಣಿಯನ್ನು ಬಂಧಿಸಿದೆ. ಈ ಕೇಸಿಗೆ ಈಗ ರಾಜಕೀಯ ಬಣ್ಣ ತಗುಲಿದೆ. 2016ರಲ್ಲಿ ಬಿಜೆಪಿ ನಾಯಕ ಯೋಗೀಶ್ ಗೌಡ ಅವರ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಪಾತ್ರ ಇದೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಾಗದಿದ್ದರೂ ಕೂಡ ಯೋಗೀಶ್ ಗೌಡ ಕುಟುಂಬ ಇಷ್ಟು ವರ್ಷಗಳ ಕಾಲ ಅವರ ವಿರುದ್ಧವೇ ಕಾನೂನು ಹೋರಾಟ ನಡೆಸುತ್ತಿತ್ತು. ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ವಿನಯ್ ಕುಲಕರ್ಣಿ ಸಚಿವರಾಗಿದ್ದರು.

ಯೋಗೀಶ್ ಗೌಡ ಕುಟುಂಬಸ್ಥರು ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ, ಆದರೆ ಸ್ವತಃ ಮುಖ್ಯಮಂತ್ರಿ ಅದರ ಅವಶ್ಯಕತೆಯಿಲ್ಲ ಎಂದಿದ್ದಾರೆ. ಹತ್ಯೆಯ ನಂತರ ಒಂದು ವಾರದೊಳಗೆ ಪೊಲೀಸರು 6 ಮಂದಿಯನ್ನು ಬಂಧಿಸಿದ್ದರೂ ಕೂಡ ಕುಟುಂಬಸ್ಥರು ಕೋರ್ಟ್ ಮೊರೆ ಹೋಗಿ ಇದರಲ್ಲಿ ವಿನಯ್ ಕುಲಕರ್ಣಿ ಪಾತ್ರವಿದೆ ಎಂದು ಹೇಳುತ್ತಿದ್ದರು. ಆದರೆ ಅದನ್ನು ಸಾಬೀತುಪಡಿಸಲು ವಿಫಲರಾಗಿದ್ದರು. ಆಗಿನ ಕಾಂಗ್ರೆಸ್ ಸರ್ಕಾರ ವಿನಯ್ ಕುಲಕರ್ಣಿ ಪರ ನಿಂತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು.

ವಿನಯ್ ಕುಲಕರ್ಣಿ ಬೆದರಿಕೆ ಹಾಕುತ್ತಾ ಸಂಭಾಷಣೆ ನಡೆಸುವ ಆಡಿಯೊ ಕ್ಲಿಪ್ ಬಹಿರಂಗಗೊಂಡ ನಂತರ ಯೋಗೀಶ್ ಗೌಡ ಕುಟುಂಬ ಮುಖ್ಯವಾಗಿ ಅವರ ಸೋದರ ಗುರುನಾಥ ಗೌಡ ಮತ್ತೊಮ್ಮೆ ನ್ಯಾಯಾಲಯದ ಮುಂದೆ ಹೋಗಿ ಕುಲಕರ್ಣಿ ಮತ್ತು ಇಬ್ಬರು ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳು ತಮ್ಮ ಸೋದರನ ಸಾವಿನ ಹಿಂದಿನ ಸಾಕ್ಷ್ಯಗಳನ್ನು ನಾಳಪಡಿಸಲು ನೋಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಧಾರವಾಡ ಕೋರ್ಟ್ ಆದೇಶ ನೀಡಿದ್ದರೂ ಕೂಡ ನಗರ ಪೊಲೀಸರು ಕುಲಕರ್ಣಿ ವಿರುದ್ಧ ಕೇಸು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಕೊನೆಗೆ ಹೈಕೋರ್ಟ್ ನ ಧಾರವಾಡ ಪೀಠ ಮತ್ತು ಪೊಲೀಸರು ಕಳೆದ ವರ್ಷ ಏಪ್ರಿಲ್ ನಲ್ಲಿ ಕೇಸು ದಾಖಲಿಸಿಕೊಂಡರು. ಕಳೆದ ವರ್ಷ ಮಾರ್ಚ್ ನಲ್ಲಿ ಹೈಕೋರ್ಟ್ ಗುರುನಾಥ ಗೌಡ ಮತ್ತು ಅವರ ತಾಯಿ ತುಂಗಮ್ಮ ಅವರು ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಮನವಿಯನ್ನು ತಳ್ಳಿ ಹಾಕಿತ್ತು. 

ಯೋಗೀಶ್ ಗೌಡ ಅವರ ಕೊಲೆ ರಾಜಕೀಯ ಪಿತೂರಿಯಿಂದ ಮಾಡಿದ್ದು ಎಂದು ಬಿಜೆಪಿ ಬಹಿರಂಗವಾಗಿ ಹೇಳಿಕೊಂಡು ಬಂದಿದ್ದರಿಂದ 2018ರ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆಗಳಲ್ಲಿ ವಿನಯ್ ಕುಲಕರ್ಣಿ ಸೋಲು ಕಂಡರು. ಸಿಬಿಐ ತನಿಖೆಗೆ ವಹಿಸುವ ಭರವಸೆಯನ್ನು ಬಿಜೆಪಿ ನೀಡಿದ್ದು, ಕಳೆದ ಸೆಪ್ಟೆಂಬರ್ ನಲ್ಲಿ ಯಡಿಯೂರಪ್ಪ ಸರ್ಕಾರದ ಶಿಫಾರಸು ಮೇರೆಗೆ ಸಿಬಿಐ ತನಿಖೆ ಕೈಗೆತ್ತಿಕೊಂಡಿತು. ಈ ಮಧ್ಯೆ, ಸಿಬಿಐ ತನಿಖೆಗಾಗಿ ಹೈಕೋರ್ಟ್ ಆದೇಶದ ವಿರುದ್ಧ ಬಿಜೆಪಿ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ವಿಶೇಷ ರಜೆ ಅರ್ಜಿ ಸಲ್ಲಿಸಿದೆ. ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶವನ್ನು ತಡೆಹಿಡಿದಿದೆ ಮತ್ತು ಕೇಂದ್ರ ಏಜೆನ್ಸಿಯ ತನಿಖೆಗೆ ಅವಕಾಶ ನೀಡಿತು.

ಸಿಬಿಐ ತನಿಖೆ ಕೈಗೆತ್ತಿಕೊಂಡ ಮೇಲೆ ಯೋಗೀಶ್ ಗೌಡ ಕೊಲೆಯ ಒಂದೊಂದೇ ಕರಾಳ ಮುಖಗಳು ಹೊರಬರುತ್ತಿವೆ. ಕೊಲೆಗೆ ಪಿತೂರಿ ಮತ್ತು ಸಂಚು ರೂಪಿಸಿದ ಆರೋಪದ ಮೇಲೆ ತಮಿಳು ನಾಡಿನ ಹಳ್ಳಿಯೊಂದರಿಂದ 8 ಮಂದಿಯನ್ನು ಬಂಧಿಸಲಾಗಿದೆ. ಸಿಬಿಐ, ಉನ್ನತ ಪೊಲೀಸ್ ಅಧಿಕಾರಿಗಳು, ವಿನಯ್ ಕುಲಕರ್ಣಿಯವರ ನಿಕಟವರ್ತಿಗಳು, ಅವರ ಸೋದರ ವಿಜಯ್ ಕುಲಕರ್ಣಿಯವರನ್ನು ಸಹ ತನಿಖೆ ಮಾಡಿದೆ.

ಸಿಬಿಐ ತನಿಖೆಯನ್ನು ತಪ್ಪಿಸಲು ಇತ್ತೀಚೆಗೆ ವಿನಯ್ ಕುಲಕರ್ಣಿ ಬಿಜೆಪಿಗೆ ಸೇರುವ ಪ್ರಯತ್ನ ಮಾಡಿದ್ದರು. ಪ್ರಮುಖ ಬಿಜೆಪಿ ನಾಯಕರು ಮತ್ತು ಲಿಂಗಾಯತ ಮಠದ ಸ್ವಾಮೀಜಿಗಳ ಪ್ರಭಾವ ಬಳಸಿ ಬಿಜೆಪಿಯ ಕೇಂದ್ರ ನಾಯಕರ ಮನವೊಲಿಸಲು ಯತ್ನಿಸಿದ್ದರು, ಆದರೆ ಅದು ಫಲ ಕೊಡಲಿಲ್ಲ.

SCROLL FOR NEXT