ರಾಜ್ಯ

ಬಿದ್ದು, ಎದ್ದು, ಗೆದ್ದು ಬರುವೆನು; ಅಪಪ್ರಚಾರ ವಿರುದ್ಧ ಸತ್ಯ ಅತ್ಯುತ್ತಮ ಸಮರ್ಥನೆ: ವಿನಯ್ ಕುಲಕರ್ಣಿ

Sumana Upadhyaya

ಧಾರವಾಡ: ಅಪಪ್ರಚಾರದ ವಿರುದ್ಧ ಸತ್ಯ ಅತ್ಯುತ್ತಮ ಸಮರ್ಥನೆಯಾಗಿದೆ. ಈಗ ನಾನು ಬಿದ್ದಂತೆ ಕಂಡರೂ ಬಿದ್ದು ಎದ್ದು ಗೆದ್ದು ಬರುವೆನು, ಸತ್ಯದ ತಳಹದಿಯಿಂದ ಎದ್ದು ಗೆದ್ದು ಬರುವೆನು ಎಂದು ಮಾಜಿ ಸಚಿವ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಪ್ರತಿಕ್ರಿಯಿಸಿದ್ದಾರೆ.

2016ರಲ್ಲಿ ಬಿಜೆಪಿ ಮುಖಂಡ ಯೋಗೀಶ್ ಗೌಡರ ಕೊಲೆ ಕೇಸಿಗೆ ಸಂಬಂಧಪಟ್ಟಂತೆ ಸಿಬಿಐ ನಿನ್ನೆ ವಿನಯ್ ಕುಲಕರ್ಣಿಯವರನ್ನು ವಶಕ್ಕೆ ಪಡೆದುಕೊಂಡು ನಂತರ ಬಂಧಿಸಿದೆ. ಇದಕ್ಕೆ ಸಂಬಂಧಪಟ್ಟಂತೆ ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಈ ಪ್ರಕರಣದಲ್ಲಿ ಆರೋಪಮುಕ್ತನಾಗಿ ಹೊರಬರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಸುಳ್ಳು ಕುಣಿಯುತ್ತಿರುವಾಗ ಸತ್ಯ ಅಳುತ್ತದೆ ಆದರೆ ಸತ್ಯ ಎದ್ದು ನಿಂತಾಗ ಸುಳ್ಳು ಸತ್ತೆ ಹೋಗುತ್ತದೆ". ಸತ್ಯಕ್ಕೆ ಸೋಲಿಲ್ಲ, ನನ್ನೆಲ್ಲಾ ಪ್ರೀತಿ ಪಾತ್ರರು ನನ್ನ ಮೇಲಿಟ್ಟಿರುವ ನಂಬಿಕೆಗೆ ನಾನು ಚಿರಋಣಿ, ನಿಮ್ಮೆಲ್ಲರ ಹಾರೈಕೆ ಹಾಗೂ ನಂಬಿಕೆ ಎಂದು ಸುಳ್ಳಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ. 

ಈ ದೇಶದಲ್ಲಿ ಕಾನೂನಿಗಿಂತ ರಾಜಕೀಯ ಪಿತೂರಿಯೇ ಬಲಿಷ್ಠವಾಗಿದೆ ಎಂದು ಕೂಡ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. 
ಇಂದು ವಿನಯ್ ಕುಲಕರ್ಣಿಯವರನ್ನು ಸಿಬಿಐ ಮೂರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ. ಸಿಬಿಐ ಮೂರು ದಿನಗಳ ಕಸ್ಟಡಿಗೆ ಕೇಳಿದೆ. ವಿಡಿಯೊ ಸಂವಾದ ಮೂಲಕ ವಿಚಾರಣೆ ನಡೆಯಲಿದೆ. 

SCROLL FOR NEXT