ರಾಜ್ಯ

ಕಾರ್ಮಿಕರ ದಿಢೀರ್ ಪ್ರತಿಭಟನೆ: ಟೊಯೋಟಾ ಮೋಟಾರ್ಸ್ ಬಿಡದಿ ತಯಾರಿಕಾ ಘಟಕ ಲಾಕೌಟ್!

Manjula VN

ಬೆಂಗಳೂರು: ಕಾರ್ಮಿಕ ಸಂಘದ ಪದಾಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಿದ್ದನ್ನು ಖಂಡಿಸಿ ಸಾವಿರಾರು ಕಾರ್ಮಿಕರು ದಿಢೀರ್ ಪ್ರತಿಭಟನೆಗಿಳಿದ ಬಳಿಕ ಬಿಡದಿಯ ಕೈಗಾರಿಗಾ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿ (ಟಿಕೆಎಂ)ಯನ್ನು ಅನಿರ್ದಿಷ್ಟಾವಧಿವರೆಗೂ ಲಾಕೌಟ್ ಮಾಡಲಾಗಿದೆ. 

ಕಾರ್ಮಿಕರು ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಏಕಾಏಕಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ನೌಕರರ ಸುರಕ್ಷತಾ ದೃಷ್ಟಿಯಿಂದ ಅನಿರ್ದಿಷ್ಟಾವಧಿವರೆಗೂ ಕಾರ್ಖಾನೆಯನ್ನು ಲಾಕೌಟ್ ಮಾಡಲಾಗಿದೆ. ಪ್ರತಿಭಟನೆ ಹಿಂಪಡೆಯುವ ಸಂಬಂಧ ಕಾರ್ಮಿಕರ ಸಂಘಟನೆ ಜೊತೆಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಕಂಪನಿಯು ಅಧಿಕೃತ ಹೇಳಿಕೆ ನೀಡಿದೆ. 

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ತನ್ನ ನೌಕರರು ಸೇರಿದಂತೆ ಎಲ್ಲಾ ಪಾಲುದಾರರ ಯೋಗಕ್ಷೇಮ ಕಾಯಲು ಬದ್ಧವಾಗಿದೆ. ಸೌಹಾರ್ದಯುತ ಮತ್ತು ಆರೋಗ್ಯಕರ ಕೆಲಸದ ವಾತಾವರಣವನ್ನು ಕಾಪಾಡಿಕೊಳ್ಳುವ ನಮ್ಮ ಪ್ರಯತ್ನದ ನಡುವೆ ಕೆಲವರು, ಶಿಸ್ತು ಉಲ್ಲಂಘಿಸುವ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾರೆ. ಇಂತಹವನ್ನು ಕಂಪನಿಯ ಕಾನೂನು ಮತ್ತು ಸೇವಾ ನಿಯಮದಂತೆ ಅಮಾನತುಗೊಳಿಸಿ ವಿಚಾರಣೆಯಲ್ಲಿ ಇರಿಸಲಾಗಿದೆ ಎಂದು ಮಾಹಿತಿ ನೀಡಿದೆ. 

ಪ್ರಸ್ತುತ ಟಿಕೆಎಂ ಯೂನಿಯನ್ ಅಕ್ರಮವಾಗಿ ಮುಷ್ಕರವನ್ನು ನಡೆಸುತ್ತಿದ್ದು, ಗುಂಪು ಸೇರುವ ಮೂಲಕ ಕೋವಿಡ್-19 ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಕಾರ್ಖಾನೆಯ ಆವರಣದಲ್ಲಿ ಉಳಿದಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ನೌಕರರ ಸುರಕ್ಷತೆ ದೃಷ್ಟಿಯಿಂದ ಕಂಪನಿಯ ಮುಂದಿನ ಆದೇಶ ಬರುವವರೆಗೂ ಬಿಡದಿ ಘಟಕದಲ್ಲಿ ಲಾಕೌಟ್ ಘೋಷಿಸಲಾಗಿದೆ. ಸಮಸ್ಯೆ ಕುರಿತು ಯೂನಿಯನ್ ಜೊತೆಗೆ ಮಾತುಕತೆ ನಡೆಸಲಾಗುತ್ತಿದೆ ಎಂದಿದೆ. 

SCROLL FOR NEXT