ಬೆಂಗಳೂರು: ದೇಶದಲ್ಲಿ ಸಹಕಾರಿ ಆಂದೋಲನದ ಯಶಸ್ಸನ್ನು ಆಚರಿಸಲು ಪ್ರತಿ ವರ್ಷ ನಡೆಸುವ ಸಹಕಾರ ಸಪ್ತಾಹಕ್ಕೆ ಶನಿವಾರದಿಂದ ಚಾಲನೆ ದೊರೆಯಲಿದೆ.
ಈ ಸಹಕಾರ ಸಪ್ತಾಹವನ್ನು ವಿಧಾನಸೌಧದ ಬಾಂಕ್ವೆಟ್ ಸಭಾಂಗಣದಲ್ಲಿ ಬೆಳಿಗ್ಗೆ 10.45 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉದ್ಘಾಟಿಸಲಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ 67ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಸಹಕಾರ ಇಲಾಖೆ ಮತ್ತು ರಾಜ್ಯದ ಎಲ್ಲಾ ರೀತಿಯ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಸಪ್ತಾಹಕ್ಕೆ ಚಾಲನೆ ನೀಡಲಾಗುವುದು. ಶನಿವಾರದಿಂದ 7 ದಿನ (ನ.14ರಿಂದ ನ.20ರವರೆಗೆ) ರಾಜ್ಯದಲ್ಲಿ ಸಹಕಾರ ಸಪ್ತಾಹ ನಡೆಯಲಿದೆ.
ಉದ್ಘಾಟನೆಗೂ ಮುನ್ನ ಬೆಳಿಗ್ಗೆ 9.15ಕ್ಕೆ ರೇಸ್ ಕೋರ್ಸ್ ರಸ್ತೆಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಆವರಣದಲ್ಲಿ 66 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ಬೃಹದಾಕಾರದ ಸಹಕಾರ ಧ್ವಜಾರೋಹಣವನ್ನು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಅವರು ನೆರವೇರಿಸಲಿದ್ದಾರೆ.
ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಹಕಾರಿಗಳಿಗೆ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ನಂತರ ಸಹಕಾರವಾರತ್ರಿಕೆ ವಿಶೇಷ ಸಂಚಿಗೆ ಮತ್ತು ಮಹಾಮಂಡಳದ ಕಾರ್ಯ ಚಟುವಟಿಕೆಯ ಕೈಪಿಡಿಯನ್ನು ಅತಿಥಿ ಗಣ್ಯರು ಬಿಡುಗಡೆ ಮಾಡಲಿದ್ದಾರೆ.