ರಾಜ್ಯ

ಬೆಂಗಳೂರು ಟೆಕ್ ಶೃಂಗಕ್ಕೆ ಯಶಸ್ವಿ ತೆರೆ: ದೇಶ ವಿದೇಶದ 2.5 ಕೋಟಿ ಜನರನ್ನು ತಲುಪಿ ದಾಖಲೆ ಬರೆದ ಶೃಂಗ

Manjula VN

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗ ಸವಾಲಿನ ನಡುವೆಯೇ ದೇಶದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಸಂಪೂರ್ಣ ವರ್ಚುವಲ್ ರೂಪದಲ್ಲಿ ನಡೆದ ಮೂರು ದಿನಗಳ ಬೆಂಗಳೂರು ತಂತ್ರಜ್ಞಾನ ಸಮಾವೇಶ-2020 ಅತ್ಯಂತ ಯಶಸ್ವಿಯಾಗಿದ್ದು, ಇದೇ ಮೊದಲ ಬಾರಿಗೆ ವರ್ಚುಯಲ್‌ ವೇದಿಕೆಯ ಮೂಲಕ ನಡೆದ ಈ ಪ್ರತಿಷ್ಠಿತ ಶೃಂಗವು 2.5 ಕೋಟಿಗೂ ಹೆಚ್ಚು ದೇಶ- ವಿದೇಶಿಯರನ್ನು ತಲುಪಿ ದಾಖಲೆ ಸೃಷ್ಟಿಸಿದೆ. 

ಗುರುವಾರ ಬೆಳಿಗ್ಗೆ 10 ಗಂಟೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ ಬೆಂಗಳೂರು ಟೆಕ್ ಸಮಿಟ್-2020ಗೆ ಶನಿವಾರ ಸಂಜೆ ವೇಳೆಗೆ ತೆರೆ ಬಿದ್ದಿದೆ. ವರ್ಚುವಲ್ ರೂಪದಲ್ಲಿ ಇಡೀ ಜಗತ್ತನ್ನು ಬೆಂಗಳೂರಿನಲ್ಲಿ ತೆರೆದಿಟ್ಟು, ವರ್ಚುವಲ್ ಸಮಾವೇಶವನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ರಾಜ್ಯ ಸರ್ಕಾರವು ನೆಕ್ಸ್ಟ್ ಈಸ್ ನೌ ಎಂಬುದು ಸಾಧ್ಯ ಎಂಬುದನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದೆ. 

ಿದರ ನಡುವೆ ಕರ್ನಾಟಕವು 8 ಜಾಗತಿಕ ರಾಷ್ಟ್ರಗಳೊಂದಿಗೆ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದ್ದು, 25 ಪ್ರಮುಖ ದೇಶಗಳೊಂದಿಗೆ ತಂತ್ರಜ್ಞಾನ ವಿಚಾರ ವಿನಿಮಯ, ಮೊಟ್ಟ ಮೊದಲ ಬಾರಿಗೆ ಕರ್ನಾಟಕ ಜೈವಿಕ ಆರ್ಥಿಕತೆ ವರದಿ ಮಂಡನೆ, ವರ್ಚುವಲ್ ವಿಶ್ವರೂಪ್ ಸೇರಿದಂತೆ ಹಲವು ಪ್ರಥಣಗಳಿಗೆ ಸಾಕ್ಷಿಯಾಗಿದೆ. ಸಮಾವೇಶದಲ್ಲಿ 248 ಸಂಸ್ಥೆಗಳು ವರ್ಚುವಲ್ ಬೂತ್'ಗಳ ಮೂಲಕ ತಂತ್ರಜ್ಞಾನ ಪ್ರದರ್ಶನದಲ್ಲಿ ಭಾಗವಹಿಸಿದ್ದವು. ಆಸ್ಟ್ರೇಲಿಯಾ, ಕೆನಡಾ, ಯುಎಸ್ಎಸ್, ಬವಾರಿಯಾ, ಯುಕೆ, ಜರ್ಮನಿಯಂತಹ ರಾಷ್ಟ್ರಗಳೂ ತಮ್ಮ ಬೂತ್ ಪ್ರದರ್ಶಿಸಿದ್ದವು. ಅಲ್ಲದೆ, 146 ನವೋದ್ಯಮ ತಂತ್ರಜ್ಞಾನ, 312 ವ್ಯಾವಹಾರಿಕ ಸಭೆ, 12 ಮುಖ್ಯ ಭಾಷಣ, 93 ವಿಚಾರಗೋಷ್ಠಿ, 357 ಪ್ರಧಾನ ಭಾಷಣಕಾರರು, 25 ದೇಶಗಳ 731 ವಿದೇಶಿ ಪ್ರತಿನಿಧಿಗಳು, ಸಚಿವರ ಹಂತದ 10 ನಿಯೋಗಗಳು ಸೇರಿ ಒಟ್ಟು 8,507 ಮಂದಿ ಬ್ಯುಸಿನೆಸ್ ವಿಸಿಟರ್ಸ್ ಸಮಿಟ್'ನಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ, ಒಟ್ಟು 19,381 ಮಂದಿ ಪಾಲ್ಗೊಂಡು ದಾಖಲೆ ಸೃಷ್ಟಿಸಿದೆ. 

SCROLL FOR NEXT