ಬೆಂಗಳೂರು: ಇನ್ನು ಕೆಲ ದಿನಗಳವರೆಗೆ ಒಣಹವೆ ಮುಂದುವರಿಯಲಿದ್ದು, ನವೆಂಬರ್ 24ರಿಂದ ಎರಡು ದಿನಗಳವರೆಗೆ ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆ ಸುರಿಯುವ ಸಾಧ್ಯತೆಯಿಂದ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೋಡ ಮುಸುಕು ಇಲ್ಲದೆ, ಶುಭ್ರ ಆಕಾಶ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸದ್ಯ ಕಂಡುಬರುತ್ತಿದ್ದು, ಇದರಿಂದಾಗಿ ಮುಂಜಾನೆ ಹೊತ್ತು ಮಂಜು ಕಂಡುಬರುತ್ತಿದೆ. ಸಾಯಂಕಾಲ ಹೊತ್ತು ಕೂಡ ಚಳಿ ಮಂಜು ಇರುತ್ತದೆ. ದಾವಣಗೆರೆಯಲ್ಲಿ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್ ನಿನ್ನೆ ಬೆಳಗ್ಗೆ 8.30ರವರೆಗೆ ದಾಖಲಾಗಿದೆ. ಬೆಂಗಳೂರಿನಲ್ಲಿ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಅದು ಸಾಮಾನ್ಯ ತಾಪಮಾನಕ್ಕಿಂತ 0.9 ಡಿಗ್ರಿ ಸೆಲ್ಸಿಯಸ್ ಗಳಷ್ಟು ಕಡಿಮೆಯಾಗಿದೆ. ಹೆಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಕನಿಷ್ಠ 15.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಅದು ಸಾಮಾನ್ಯಕ್ಕಿಂತ 1.9 ಡಿಗ್ರಿ ಸೆಲ್ಸಿಯಸ್ ಗಳಷ್ಟು ಕಡಿಮೆಯಾಗಿದೆ.
ಬೆಂಗಳೂರು ಹವಾಮಾನ ಇಲಾಖೆ ನಿರ್ದೇಶಕ ಸಿ ಎಸ್ ಪಾಟೀಲ್, ಚಂಡಮಾರುತದ ಪರಿಣಾಮ ಹಿಂದೂ ಮಹಾಸಾಗರ ಮತ್ತು ಬಂಗಾಳಕೊಲ್ಲಿಯ ದಕ್ಷಿಣ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶಗಳು ಏರ್ಪಟ್ಟಿದ್ದು, ಇದರಿಂದಾಗಿ ದಕ್ಷಿಣ ಒಳನಾಡು ಭಾಗಗಳಲ್ಲಿ ನವೆಂಬರ್ 24 ಮತ್ತು 25ರಂದು ಮಳೆಯಾಗುವ ಸಾಧ್ಯತೆಯಿದೆ, ಹೀಗಾಗಿ ಯಲ್ಲೋ ಎಲರ್ಟ್ ಘೋಷಿಸಲಾಗಿದೆ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕೂಡ ಸ್ವಲ್ಪ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.