ರಾಜ್ಯ

ಗಂಡು ಹುಲಿಯೊಂದಿಗೆ ಕಾದಾಟ: ಭದ್ರಾ ಅರಣ್ಯದಲ್ಲಿ ಹೆಣ್ಣು ಹುಲಿ ಸಾವು

Srinivasamurthy VN

ಬೆಂಗಳೂರು: ಭದ್ರಾ ಮೀಸಲು ಅರಣ್ಯ ಪ್ರದೇಶದಲ್ಲಿ ಹೆಣ್ಣು ಹುಲಿಯೊಂದು ಸಾವನ್ನಪ್ಪಿದ್ದು, ಹುಲಿಗಳ ನಡುವಿನ ಕಾದಾಟವೇ ಹುಲಿ ಸಾವಿಗೆ ಕಾರಣ ಎಂದು ಹೇಳಲಾಗಿದೆ.

ತೆಗುರು ಗುಡ್ಡಾ ಮಿತಿಯಲ್ಲಿನ ಹೆಬ್ಬೆ ವ್ಯಾಪ್ತಿಯಲ್ಲಿರುವ ಭದ್ರಾ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸುಮಾರು 5 ವರ್ಷ ಪ್ರಾಯದ ಹೆಣ್ಣು ಹುಲಿ ಕಾದಾಟದಲ್ಲಿ ಸಾವನ್ನಪ್ಪಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅಜಯ್ ಮಿಶ್ರಾ ಅವರು,  ಸಾವಿಗೀಡಾದ ಹುಲಿಯ ಎಲ್ಲಾ ಉಗುರುಗಳು ಮತ್ತು ಕೋರೆಹಲ್ಲುಗಳು ಹಾಗೇ ಇದ್ದವು. ಹುಲಿಯ ದೇಹದ ಮೇಲೆ ಮತ್ತೊಂದು ಹುಲಿಯ ಉಗುರಿನ ಗುರುತುಗಳಿದ್ದು, ಮೇಲ್ನೋಟಕ್ಕೆ ಇದು ಹುಲಿಗಳ ಕಾದಾಟ ಎಂದು ತಿಳಿಯುತ್ತದೆ. ಅದಾಗ್ಯೂ ಹೆಚ್ಚಿನ ಮಾಹಿತಿಗಾಗಿ ಹುಲಿಯ ಮೃತದೇಹವನ್ನು ಪರೀಕ್ಷೆಗೆ  ಕಳುಹಿಸಲಾಗಿದೆ ಎಂದು ಹೇಳಿದರು. 

ಹುಲಿಗಳು ತಮ್ಮ ಪ್ರದೇಶಗಳನ್ನು ರಕ್ಷಿಸಲು ಮತ್ತು ಹೊರಗಿನಿಂದ ಇತರ ಹುಲಿಗಳೊಂದಿಗೆ ಹೋರಾಡಲು ಹೆಸರುವಾಸಿಯಾಗಿದ್ದು, ಪ್ರಸ್ತುತ ಸಿಕ್ಕಿರುವ ಹುಲಿಯ ದೇಹವನ್ನು ಪರಿಶೀಲಿಸಿದರೆ ಮೂರು ದಿನಗಳ ಹಿಂದೆ ಹುಲಿ ಸಾವನ್ನಪ್ಪಿರಬಹುದು ಎಂದು ಭದ್ರಾ ಟೈಗರ್ ಯೋಜನಾ ನಿರ್ದೇಶಕ ತಕತ್ ಸಿಂಗ್ ರಣಾವತ್  ಹೇಳಿದ್ದಾರೆ. ಈ ಪ್ರದೇಶವು ದಟ್ಟವಾದ ಅರಣ್ಯವಾಗಿರುವುದರಿಂದ, ಈ ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರಿಯಲು ಬೀಟ್ ಫಾರೆಸ್ಟರ್ ಗಳಿಗೆ 2-3 ದಿನಗಳನ್ನು ತಗಲುತ್ತದೆ. ಹೀಗೆ ಬೀಟ್ ಹಾಕುವ ಸಂದರ್ಭದಲ್ಲೇ ಹುಲಿ ದೇಹ ಪತ್ತೆಯಾಗಿದೆ ಎಂದು ಮಿಶ್ರಾ ಹೇಳಿದ್ದಾರೆ.

ಹುಲಿ ಸಾವಿನಲ್ಲಿ ಯಾವುದೇ ರೀತಿಯ ಶಂಕಾಸ್ಪದ ಅಂಶಗಳು ಕಂಡುಬಂದಿಲ್ಲ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ನಿಗದಿಪಡಿಸಿದ ಕಾರ್ಯವಿಧಾನದ ಪ್ರಕಾರ ಬುಧವಾರ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಸುಡಲಾಯಿತು. ಈ ಪ್ರದೇಶದಲ್ಲಿ ಬೇಟೆಯಾಡುವ ಪ್ರಕರಣಗಳು ನಿಯಂತ್ರಣದಲ್ಲಿವೆ ಎಂದು  ಹೇಳಿದ್ದಾರೆ. ಅಲ್ಲದೆ ಕೆಲ ಸಮೀಪದ ಗ್ರಾಮಸ್ಥರು,  ಕಾಡಿನ ತೇಪೆಗಳ ಅಂಚಿನಲ್ಲಿ ಅಲೆದಾಡುವ ಕಾಡುಹಂದಿಗಳನ್ನು ಹಿಡಿಯಲು ಬಲೆಗಳನ್ನು ಹಾಕಿರುತ್ತಾರೆ. ಈ ಬಲೆಗಳು ಹುಲಿಯನ್ನು ಹಿಡಿಯಲು ಅಲ್ಲ ಎಂದು ಮತ್ತೋರ್ವ ಅಧಿಕಾರಿ ಸ್ಪಷ್ಟಪಡಿಸಿದರು. 

ಶಿವಮೊಗ್ಗದಿಂದ ಪಶುವೈದ್ಯರು ಸ್ಥಳಕ್ಕೆ ಬರುವ ಹೊತ್ತಿಗೆ ಸಂಜೆ 6 ಗಂಟೆಯಾಗಿತ್ತು. ಕಾರ್ಯವಿಧಾನಗಳ ಪ್ರಕಾರ ಮರಣೋತ್ತರ ಪರೀಕ್ಷೆ ನಡೆಸಲಾಯಿತು ಮತ್ತು ಶವದ ಮೇಲೆ ಹಲ್ಲುಗಳ ಗುರುತುಗಳು ಕಂಡುಬಂದಿದ್ದು, ಇದು ಹುಲಿಗಳ ಕಾದಾಟಕ್ಕೆ ಸಾಕ್ಷಿಯಾಗಿದೆ. ತನ್ನ ಭೂಪ್ರದೇಶ ಮತ್ತು ವಿಸ್ತರಣೆಗಾಗಿ ಗಂಡು  ಹೆಣ್ಣಿನ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸಿದಾಗ ಇಂತಹ ಕಾದಾಟಗಳು ನಡೆಯುತ್ತವೆ. ಅಲ್ಲದೆ ಗಂಡು ಹುಲಿ ಹೆಣ್ಣು ಹುಲಿಯೊಂದಿಗೆ ಸೇರಲು ಬಯಸಿದಾಗ ಅದನ್ನು ಹೆಣ್ಣು ಹುಲಿ ನಿರಾಕರಿಸಿದಾಗಲೂ ಇಂತಹ ಕಾದಾಟಗಳು ಸಂಭವಿಸುತ್ತವೆ. ಈ ಕಾದಾಟದ ವೇಳೆ ಈ ಗುರುತುಗಳು ಸಾಮಾನ್ಯವಾಗಿ  ಕಂಡುಬರುತ್ತವೆ ಎಂದು ಹಿರಿಯ ಅರಣ್ಯ ಅಧಿಕಾರಿ ಹೇಳಿದರು. 

ಕಳೆದ ಎರಡು ವರ್ಷಗಳಲ್ಲಿ ವರದಿಯಾದ ಎರಡನೇ ಹುಲಿ ಸಾವು ಪ್ರಕರಣ ಇದಾಗಿದ್ದು, 2019 ರಲ್ಲಿ ಹುಲಿ ಪತ್ತೆಯಾದ ಸ್ಥಳದಿಂದ 5 ಕಿ.ಮೀ ದೂರದಲ್ಲಿರುವ ಹೆಣ್ಣು ಹುಲಿ ಮಂಗಳವಾರ ಶವವಾಗಿ ಪತ್ತೆಯಾಗಿದೆ.

SCROLL FOR NEXT