ರಾಜ್ಯ

ವಿರೋಧ ಪಕ್ಷಗಳು ರೈತರನ್ನು ತಪ್ಪು ಹಾದಿಗೆಳೆಯುತ್ತಿವೆ: ಸದಾನಂದಗೌಡ

Manjula VN

ಬೆಂಗಳೂರು: ಕೃಷಿ ಮಸೂದೆಗಳ ವಿರುದ್ಧ ಕರ್ನಾಟಕ ಸೇರಿದಂತೆ ದೇಶದ ಇತರೆ ಭಾಗಗಳಲ್ಲಿನ ರೈತರು ಪ್ರತಿಭಟನೆ ಮುಂದುವರಿಸುತ್ತಿರುವ ನಡುವಲ್ಲೇ ಹೇಳಿಕೆ ನೀಡಿರುವ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಅವರು ಶುಕ್ರವಾರ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ರೈತರನ್ನು "ಉದ್ದೇಶಪೂರ್ವಕವಾಗಿ ಹಾದಿತಪ್ಪಿಸುತ್ತಿದ್ದು, ಪ್ರತಿಭಟಿಸಲು ಪ್ರಚೋದಿಸುತ್ತಿದ್ದಾರೆಂದು ಆರೋಪಿಸಿದ್ದಾರೆ. 

ವಿಕಾಸಸೌಧದ ಸಮ್ಮೆಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದು, ಮಸೂದೆಗಳಲ್ಲಿ ಟೀಕಿಸಲು ವಿಪಕ್ಷ ನಾಯಕರಿಗೆ ಯಾವುದೂ ಋಣಾತ್ಮಕ ಅಂಶಗಳು ಸಿಗುತ್ತಿಲ್ಲ. ಹೀಗಾಗಿ ಕಾಯಿದೆಗಳ ವಿಚಾರವಾಗಿ ಅಪಪ್ರಚಾರ ಮಾಡುತ್ತಿದ್ದು, ದಳ್ಳಾಳಿಗಳಿಗಾಗಿ ವಿಪಕ್ಷಗಳು ಧ್ವನಿಯೆತ್ತುವ ಮೂಲಕ ಸರ್ಕಾರದ ವಿರುದ್ಧ ರೈತರನ್ನು ಎತ್ತಿಕಟ್ಟುವ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ಕೇಂದ್ರದ ಹೊಸ ಕೃಷಿ ಕಾಯ್ದೆಗಳು ರೈತರನ್ನು ಎಲ್ಲ ಬಂಧನದಿಂದ ಮುಕ್ತಗೊಳಿಸಿದ್ದು, ಮಸೂದೆಗಳು ಕೃಷಿ ಕ್ಷೇತ್ರದಲ್ಲಿ ಹೊಸ ಮನ್ವಂತರಕ್ಕೆ ಕಾರಣವಾಗಲಿವೆ. ಕನಿಷ್ಠ ಬೆಂಬಲ ಬೆಲೆ ಯೋಜನೆ – ಎಂ.ಎಸ್.ಪಿ ಯೋಜನೆಯನ್ನು ಕೈಬಿಡುವುದಿಲ್ಲ. ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಹಿಂತೆಗೆದುಕೊಳ್ಳಲಾಗುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದೆ. 

ಕನಿಷ್ಠ ಬೆಂಬಲ ವ್ಯವಸ್ಥೆಯನ್ನು ಮುಂದುವರೆಸುವ ಜೊತೆಗೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಕೇಂದ್ರ ಕ್ರಮಕೈಗೊಂಡಿದೆ. ಕನಿಷ್ಠ ಬೆಂಬಲ ಬೆಲೆ ಮುಂದುವರೆಸುವ ಬಗ್ಗೆ ಸಂಸತ್ತಿನಲ್ಲೂ ಹಾಗೂ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. ಈಗಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ - ಎಪಿಎಂಸಿಗಳು ರದ್ದಾಗುತ್ತವೆ ಎಂಬುದು ರೈತರನ್ನು ದಾರಿತಪ್ಪಿಸಲು ಹೇಳುತ್ತಿರುವ ಮತ್ತೊಂದು ಸುಳ್ಳಾಗಿದೆ ಎಂದು ತಿಳಿಸಿದ್ದಾರೆ. 

SCROLL FOR NEXT