ರಾಜ್ಯ

ಪ್ಯಾರಾಮೋಟರಿಂಗ್ ಅವಘಡ: ಐಎನ್ಎಸ್ ಕದಂಬ ನೌಕಾನೆಲೆ ಅಧಿಕಾರಿ ಸಾವು

Manjula VN

ಕಾರವಾರ: ನಗರದ ರವೀಂದ್ರನಾಥ ಠಾಗೋರ ಕಡಲ ತೀರದಲ್ಲಿ ಶುಕ್ರವಾರ ಪ್ಯಾರಾಮೋಟರಿಂಗ್ ಮಾಡುತ್ತಿರುವಾಗ ತಾಂತ್ರಿಕ ಸಮಸ್ಯೆ ಉಂಟಾಗಿ ಗೈಡರ್ ಹಾಗೂ ಪ್ರವಾಸಿಗ ಸಮುದ್ರಕ್ಕೆ ಬಿದ್ದು, ಒಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. 

ಐಎನ್ಎಸ್ ಕದಂಬ ನೌಕಾನೆಲೆಯ ಕ್ಯಾ.ಮಧುಸೂದನ ರೆಡ್ಡಿ (54) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಬೆಂಗಳೂರಿನ ಮೂಲದವರಾದ ರೆಡ್ಡಿ ತಮ್ಮ ಕುಟುಂಬಸ್ಥರೊಂದಿಗೆ ಆಗಮಸಿದ್ದರು. ಕುಟುಂಬಸ್ಥರು ಪ್ಯಾರಾಮೋಟರಿಂಗ್ ಪೂರ್ಣಗೊಳಿಸಿದ್ದರು. ಸಂಜೆ 5ಗಂಟೆಯ ವೇಳೆಗೆ ಕೊನೆಯದಾಗಿ ರೆಡ್ಡಿ ಪ್ಯಾರಾಮೋಟರಿಂಗ್ ಮಾಡುತ್ತಿದ್ದರು. ಆದರೆ, ಪ್ಯಾರಾಚೂಟ್ ಬಿಡಿಭಾಗಗಳು ಸವಾರರ ದೇಹಕ್ಕೆ, ಪ್ಯಾರಾಮೋಟರ್'ಗೆ ಸುತ್ತಿಕೊಂಡಿದೆ. ಗೈಡರ್ ಡಾ.ವಿದ್ಯಾಧರ ವೈದ್ಯ ಹಾಗೂ ಮಧುಸೂದನ ಉಬ್ಬರೂ ಅರಬ್ಬೀ ಸಮುದ್ರದಲ್ಲಿ ಬಿದ್ದಿದ್ದಾರೆ. 

ಸ್ಥಳದಲ್ಲಿದ್ದ ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣಾ ಕಾರ್ಯ ನಡೆಸಿ ಇಬ್ಬರನ್ನೂ ದಡಕ್ಕೆ ತಂದಿದ್ದಾರೆ. ರೆಡ್ಡಿ ಅವರನ್ನು ಕೂಡಲೇ ಆಸ್ಪತ್ರೆ ದಾಖಲಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರೆಡ್ಡಿ ಮೃತಪಟ್ಟಿದ್ದಾರೆ. ಘಟನೆ ನಡೆದು ಅರ್ಧ ತಾಸಿಗೂ ಹೆಚ್ಚಾದರೂ ಆ್ಯಂಬುಲೆನ್ಸ್ ಕೂಡ ಸ್ಥಳಕ್ಕೆ ಬಂದಿರಲಿಲ್ಲ. ಘಟನೆ ನಡೆದ ಕಡಲತೀರದಿಂದ ಕೂಗಳತೆಯ ದೂರದಲ್ಲಿ ವೈದ್ಯಕೀಯ ಕಾಲೇಜು, ಜಿಲ್ಲಾ ಆಸ್ಪತ್ರೆ ಇದ್ದರೂ ಆ್ಯಂಬುಲೆನ್ಸ್'ಗಾಗಿ ಹುಡುಕಾಡಬೇಕಾಯಿತು. 

ಕೂಡಲೇ ಆ್ಯಂಬುಲೆನ್ಸ್ ಬಾರದ ಕಾರಣ ನಗರ ಠಾಣೆಯ ಪಿಎಸ್ಐ ಸಂತೋಷ್ ಕುಮಾರ ತಮ್ಮ ಸರ್ಕಾರಿ ಜೀಪಿನಲ್ಲಿಯೇ ಮಧುಸೂದನ್ ರೆಡ್ಡಿಯವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಅಷ್ಟರಲ್ಲಾಗಲೇ ರೆಡ್ಡಿ ಸಾವನ್ನಪ್ಪಿದ್ದಾರೆ. ವಾಯುವಿಹಾರಕ್ಕೆ ಬಂದವರು ಸಮುದ್ರದ ಚಿತ್ರೀಕರಣ ಮಾಡುವಾಗ ಪ್ಯಾರಾ ಮೋಟರ್ ಬೀಳುತ್ತಿರುವ ವಿಡಿಯೋವನ್ನು ಕೆಲವರು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

SCROLL FOR NEXT