ಮೈಸೂರು: ಎನ್ ಎಸ್ ಎಸ್ ಅಧಿಕಾರಿ ಡಾ. ರಾಘವೇಂದ್ರ ಅವರು ಸಶಸ್ತ್ರ ಪಡೆ ಸೇರಬಯಸುವ ಬಹುತೇಕ ಗ್ರಾಮೀಣ ಪ್ರದೇಶದ ನೂರಾರು ಯುವ ಆಕಾಂಕ್ಷಿಗಳಿಗೆ ಉಚಿತವಾಗಿ ತರಬೇತಿ ನೀಡುವ ಮೂಲಕ ತೃಪ್ತಿ ಕಂಡುಕೊಂಡಿದ್ದಾರೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯನ ಕೊಪ್ಪಲು ನಿವಾಸಿಯಾಗಿರುವ ಡಾ. ಆರ್. ರಾಘವೇಂದ್ರ (39) ಕಳೆದ ಏಳು ವರ್ಷಗಳಲ್ಲಿ ನೂರಾರು ಸೇನಾ ಆಕಾಂಕ್ಷಿಗಳಿಗೆ ತರಬೇತಿ ನೀಡಿದ್ದಾರೆ.
ರಾಘವೇಂದ್ರ ಅವರು, ಎಂ.ಪಿಇಡಿ ಪೂರ್ಣಗೊಳಿಸಿದ್ದು, ಕ್ರೀಡಾ ಕ್ಷೇತ್ರದಲ್ಲಿ ಪಿಹೆಚ್ ಡಿ ಮಾಡಿದ್ದಾರೆ. ಅನೇಕ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕ ಹಾಗೂ ಎನ್ ಎಸ್ ಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರತಿವರ್ಷ ಅವರ ಬಳಿ ಸುಮಾರು 30 ರಿಂದ 40 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡು ತರಬೇತಿ ಪಡೆಯುತ್ತಿದ್ದಾರೆ.
ಬೆಳಿಗ್ಗೆ 5 ಗಂಟೆಗೆ ಕನಿಷ್ಠ 20 ಸೇನಾ ಆಕಾಂಕ್ಷಿಗಳು ಶ್ರೀರಂಗಪಟ್ಟಣ ತಾಲ್ಲೂಕು ಕ್ರೀಡಾಂಗಣದ ಬಳಿ ಸೇರುತ್ತಾರೆ, ಅಲ್ಲಿ ರಾಘವೇಂದ್ರ ಅವರು ಸೇನಾ ನೇಮಕಾತಿ ರ್ಯಾಲಿ ಬಗೆಗಿನ ಪ್ರಕ್ರಿಯೆಗಳ ಬಳಿ ತರಬೇತಿ ನೀಡುತ್ತಾರೆ.
ಪ್ರಸ್ತುತ ಮೈಸೂರಿನ ಶೇಷಾದ್ರಿಪುರಂ ಡಿಗ್ರಿ ಕಾಲೇಜಿನ ಎನ್ ಎಸ್ ಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ರಾಘವೇಂದ್ರ, ಆಕಾಂಕ್ಷಿಗಳ ದೈಹಿಕ ವ್ಯಾಯಾಮ ದೊಂದಿಗೆ ಅಲ್ಪಸಮಯದಲ್ಲಿ ಹೆಚ್ಚು ದೂರ ಓಡಲು ಸಹಾಯ ಮಾಡುವುದಲ್ಲದೇ, ಲಿಖಿತ ಪರೀಕ್ಷೆ ಸಿದ್ಧತೆ ಬಗ್ಗೆ ನೆರವು ನೀಡುತ್ತಾರೆ. ತಮ್ಮ ಸ್ವಂತ ಹಣದಿಂದಲೇ ಅಗತ್ಯವಾದ ವ್ಯಾಸಂಗದ ಸಲಕರಣೆಗಳನ್ನು ಆಕಾಂಕ್ಷಿಗಳಿಗೆ ಒದಗಿಸುತ್ತಾರೆ.
ರಾಘವೇಂದ್ರ ಅವರಿಂದ ತರಬೇತಿ ಪಡೆದ ಕನಿಷ್ಠ 10 ವಿದ್ಯಾರ್ಥಿಗಳು ವಿವಿಧ ಪಡೆಗಳಲ್ಲಿ ನೇಮಕ ಆಗಿದ್ದಾರೆ. ರಾಘವೇಂದ್ರ ಅವರ ತರಬೇತಿಯಿಂದ ಸೇನೆ ಸೇರಲು ನೆರವಾಯಿತು ಎಂದು ಪ್ರಸ್ತುತ ಬೆಂಗಳೂರಿನ ಆರ್ಮಿ ಸರ್ವಿಸ್ ಕಾರ್ಪ್ಸ್ ನಲ್ಲಿ (ಎಎಸ್ ಸಿ) ಸೇವೆ ಮಾಡುತ್ತಿರುವ ವಿಠಲ್ ಹೇಳುತ್ತಾರೆ.ಮಹಾರಾಷ್ಟ್ರದಲ್ಲಿ ಪ್ಯಾರಾ ಕಮಾಂಡೋ ಪಡೆಯಲಿರುವ ಪೆರುಮಾಳು ಕೂಡಾ ರಾಘವೇಂದ್ರ ಅವರಿಂದಲೇ ಸೇನೆ ಸೇರಲು ಸಹಾಯವಾಯಿತು ಎನ್ನುತ್ತಾರೆ.
ಸೇನಾ ತರಬೇತಿ ಅಲ್ಲದೇ, ಪೊಲೀಸ್, ಅರಣ್ಯ, ಆರ್ ಪಿಎಫ್ ನೇಮಕಾತಿ ಬಗ್ಗೆಯೂ ರಾಘವೇಂದ್ರ ಅವರು ತರಬೇತಿ ನೀಡುತ್ತಾರೆ. ಮಹಿಳಾ ಆಕಾಂಕ್ಷಿಗಳಿಗೆ ಸೇನೆ ಸೇರಲು ಅವಕಾಶ ಕಲ್ಪಿಸಿರುವುದರಿಂದ ಅನೇಕ ಯುವತಿಯರು ಕೂಡಾ ರಾಘವೇಂದ್ರ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ನಿರ್ದಿಷ್ಠ ಮಾರ್ಗದಲ್ಲಿ ಗುರಿ ತಲುಪಲು ಮಾರ್ಗದರ್ಶನ ನೀಡುವುದಾಗಿ ರಾಘವೇಂದ್ರ ಹೇಳುತ್ತಾರೆ.