ರಾಜ್ಯ

ಕೋವಿಡ್ ನಿಯಂತ್ರಣಕ್ಕೆ ಆದ್ಯತೆ; ಮುಷ್ಕರ ನಡೆಸುವಂತಿಲ್ಲ, ಗುತ್ತಿಗೆ ನೌಕರರಿಗೂ ಅನ್ವಯ: ಸರ್ಕಾರಿ ಆದೇಶ ಜಾರಿ

Nagaraja AB

ಬೆಂಗಳೂರು: ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಧರಣಿ ಪ್ರತಿಘಟನೆ ನಡೆಸುತ್ತಿರುವ ನೌಕರರ ಧೋರಣೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಕೊರೋನಾ ನಿಯಂತ್ರಣದಲ್ಲಿ ತೊಡಗಿರುವ ಸಾರ್ವಜನಿಕ ವಲಯದ ಯಾವುದೇ ಸಿಬ್ಬಂದಿ, ಮುಷ್ಕರ ನಡೆಸಬಾರದು ಎಂದು ಕಟ್ಟಾಜ್ಞೆ ವಿಧಿಸಿದೆ.

ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯ್‌ಭಾಸ್ಕರ್ ಅಧಿಸೂಚನೆ ಜಾರಿ ಮಾಡಿದ್ದಾರೆ.

ಇತ್ತೀಚೆಗೆ ಜಾರಿಗೆ ತಂದ ೨೦೨೦ರ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸುಗ್ರೀವಾಜ್ಞೆ ಕಾನೂನುಗಳ ಅನ್ವಯ ಸಾರ್ವಜನಿಕ ವಲಯದ ಅಧಿಕಾರಿ, ಸಿಬ್ಬಂದಿ, ಆರೋಗ್ಯ ಕ್ಷೇತ್ರದ ಸಿಬ್ಬಂದಿ, ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಮುಷ್ಕರ ನಡೆಸಬಾರದು ಎಂದು ಕಟ್ಟಪ್ಪಣೆ ಮಾಡಿದ್ದಾರೆ.

ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಜಾರಿ ಮಾಡುವ ಆದೇಶಗಳಿಗೆ ಅಸಹಕಾರ ನೀಡುವುದಾಗಲೀ ಅಥವಾ ಅವಿಧೇಯತೆ ತೋರುವುದಾಗಲೀ ಮಾಡಬಾರದು. ಆರೋಗ್ಯ ಸೇವೆಗಳಿಗೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸಲು ನಿರಾಕರಿಸುವುದು, ಮೇಲಧಿಕಾರಿಗಳ ಆದೇಶ ಪರಿಪಾಲನೆ ಮಾಡದೇ ಇರುವುದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುವುದಾಗಿ ಆದೇಶ ತಿಳಿಸಿದೆ.

ಸಾರ್ವಜನಿಕ ವಲಯ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಸೋಂಕು ನಿಯಂತ್ರಣ ಮಾಡುವ ಪ್ರಾಥಮಿಕ ಗುರಿ ಸಾಧನೆ ಮಾಡುವತ್ತಲೇ ತಮ್ಮ ಗಮನವನ್ನು ಕೇಂದ್ರೀಕರಿಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು. ರಾಜ್ಯ ನಾಗರಿಕ ಸೇವೆಗಳ ನಿಯಂತ್ರಣ ಕಾಯ್ದೆ ೧೯೬೬ರ ಅನ್ವಯವೂ ಸಹ ದಂಡನಾರ್ಹ ಕ್ರಮವಾಗಿರುತ್ತದೆ. ಎಲ್ಲರೂ ಈ ಆದೇಶವನ್ನು ಪರಿಪಾಲನೆ ಮಾಡಿ ಸೋಂಕು ನಿಯಂತ್ರಣಕ್ಕೆ ಪ್ರಧಾನ ಆದ್ಯತೆ ನೀಡುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ.

SCROLL FOR NEXT