ರಾಜ್ಯ

ದಾವಣಗೆರೆ: ಆರೋಪಿ ಕಸ್ಟಡಿಯಲ್ಲಿ ಸಾವು, ಮೂವರು ಪೊಲೀಸರು ಸೇವೆಯಿಂದ ಅಮಾನತು

Sumana Upadhyaya

ದಾವಣಗೆರೆ: ಆರೋಪಿಯ ಶಂಕಾಸ್ಪದ ಸಾವಿನ ಹಿನ್ನೆಲೆಯಲ್ಲಿ ಮಾಯಕೊಂಡ ಪೊಲೀಸ್ ಠಾಣೆಯ ಪಿಎಸ್ಐ ಸೇರಿದಂತೆ ಮೂವರು ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಪಿಎಸ್ಐ ಪ್ರಕಾಶ್, ಹೆಡ್ ಕಾನ್ಸ್ಟೇಬಲ್ ನಾಗರಾಜ್ ಮತ್ತು ಪೊಲೀಸ್ ಕಾನ್ಸ್ಟೇಬಲ್ ಶೇರ್ ಆಲಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಎಸ್ಪಿ ಹನುಮಂತರಾಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಳೆದ ಸೋಮವಾರ ಮಾಯಕೊಂಡ ಪೊಲೀಸ್ ಠಾಣೆಗೆ ಒಂದು ಫೋನ್ ಕರೆ ಬಂದಿತ್ತು. ವಿಠಲಾಪುರ ಗ್ರಾಮದ ಮರುಳಸಿದ್ದಪ್ಪ ಅವರ ಪತ್ನಿ ವೃಂದಮ್ಮ ಫೋನ್ ಕರೆ ಮಾಡಿ ತನ್ನ ಪತಿ ಮತ್ತೊಬ್ಬಳನ್ನು ವಿವಾಹವಾಗಿದ್ದು ಪತಿ ಕಾಣೆಯಾಗಿದ್ದಾರೆ, ಪತ್ತಿಹಚ್ಚಿಕೊಡುವಂತೆ ಮನವಿ ಮಾಡಿಕೊಂಡಿದ್ದರು.

ಅದರ ಪ್ರಕಾರ ಪೊಲೀಸರು ಕಾರ್ಯಪ್ರವೃತ್ತರಾಗಿ ಹುಡುಕಿದಾಗ ಹುಚ್ಚವನಹಳ್ಳಿ ಗ್ರಾಮದಲ್ಲಿ ಮರುಳಸಿದ್ಧಪ್ಪ ಪತ್ತೆಯಾಗಿದ್ದ.ಅಂದೇ ಪೊಲೀಸ್ ಠಾಣೆಗೆ ಕರೆತರಲಾಯಿತು. ಅವನ ಮನೆಯವರಿಗೆ ಪೊಲೀಸ್ ಠಾಣೆಗೆ ಬರಲು ಹೇಳಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಲಾಯಿತು. ರಾತ್ರಿಯಾಗಿದ್ದರಿಂದ ವೃಂದಮ್ಮ ಮತ್ತು ಮನೆಯವರು ಮರುದಿನ ಬರುವುದಾಗಿ ಹೇಳಿದರು.

ಮರುದಿನ ಬೆಳಗ್ಗೆ ಮರುಳಸಿದ್ಧಪ್ಪನ ಪೊಲೀಸ್ ಠಾಣೆಯಿಂದ 100 ಮೀಟರ್ ದೂರದಲ್ಲಿರುವ ರೈಲ್ವೆ ಗೇಟ್ ಹತ್ತಿರ ಬಸ್ ನಿಲ್ದಾಣದಲ್ಲಿ ಶವ ಪತ್ತೆಯಾಗಿತ್ತು. ಸ್ಥಳೀಯರು ಪ್ರತಿಭಟನೆ ಮಾಡಿ ಮರುಳಸಿದ್ಧಪ್ಪ ಕಸ್ಟಡಿಯಲ್ಲಿಯೇ ಮೃತಪಟ್ಟಿದ್ದು,ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

ಆದರೆ ಪೊಲೀಸರು ಹೇಳುವುದೇ ಬೇರೆ, ರಾತ್ರಿ ಊಟವಾದ ನಂತರ ಏಕೋ ಹೊಟ್ಟೆಯೆಲ್ಲ ಉಬ್ಬರಿಸಿದಂತೆ, ಸರಿ ಇಲ್ಲದಂತೆ ಅನಿಸುತ್ತಿದೆ ಎಂದು ಹೇಳಿದಾಗ ಹೊರಗೆ ನಡೆದುಕೊಂಡು ಬನ್ನಿ ಎಂದು ಬಿಟ್ಟೆವು, ಆದರೆ ವಾಪಾಸ್ ಬರಲಿಲ್ಲ, ಹೃದಯಾಘಾತವಾಗಿ ತೀರಿಕೊಂಡಿರಬೇಕು ಎನ್ನುತ್ತಾರೆ.

ಆದರೆ ಮರುಳಸಿದ್ದಪ್ಪ ಅವರ ಸೋದರ ರುದ್ರೇಶಿ ನನ್ನ ಸೋದರನನ್ನು ಪೊಲೀಸರು ಲಾಕಪ್ ನಲ್ಲಿ ಹೊಡೆದು ಸಾಯಿಸಿದ್ದಾರೆ ಎಂದು ಆರೋಪಿಸುತ್ತಾರೆ. ಪೂರ್ವ ವಲಯ ಐಜಿಪಿ ಎಸ್ ರವಿ ಮತ್ತು ಎಸ್ ಪಿ ಹನುಮಂತರಾಯ ಪೊಲೀಸ್ ಠಾಣೆಗೆ ಆಗಮಿಸಿ ಕರ್ತವ್ಯಲೋಪ ಮತ್ತು ಬೇಜವಬ್ದಾರಿ ಆರೋಪದ ಮೇಲೆ ಪಿಎಸ್ ಐ, ಹೆಡ್ ಕಾನ್ಸ್ಟೇಬಲ್ ಮತ್ತು ಪೊಲೀಸ್ ಕಾನ್ಸ್ಟೇಬಲ್ ಅವರನ್ನು ಅಮಾನತುಗೊಳಿಸಿ ತನಿಖೆಗೆ ಬಂಧಿಸಲಾಗುವುದು ಎಂದಿದ್ದಾರೆ.

SCROLL FOR NEXT