ರಾಜ್ಯ

ಬೆಂಗಳೂರಿಗೆ ಉಪನಗರ ರೈಲು ಯೋಜನೆ: ಕೇಂದ್ರ ಸರ್ಕಾರದಿಂದ ಹಸಿರು ನಿಶಾನೆ

Sumana Upadhyaya

ಬೆಂಗಳೂರು: ಮೂರು ದಶಕಗಳ ನಂತರ ಕೇಂದ್ರ ಸಚಿವ ಸಂಪುಟ 15 ಸಾವಿರದ 767 ಕೋಟಿ ರೂಪಾಯಿಗಳ ಬೆಂಗಳೂರು ನಗರಕ್ಕೆ ಉಪನಗರ ರೈಲು ಯೋಜನೆಗೆ ಹಸಿರು ನಿಶಾನೆ ತೋರಿಸಿದೆ.

ಆದರೆ ರಾಜ ರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಇದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರವಾಗಲಿ, ರೈಲ್ವೆ ಸಚಿವರಾಗಲಿ, ಕರ್ನಾಟಕದ ರೈಲ್ವೆ ಅಧಿಕಾರಿಗಳಾಗಲಿ ಅಧಿಕೃತ ಘೋಷಣೆಯನ್ನು ಮಾಡಿಲ್ಲ ಎಂದು ಇಲಾಖೆಯ ಹಲವು ಮೂಲಗಳಿಂದ ತಿಳಿದುಬಂದಿದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಉಪನಗರ ರೈಲು ಯೋಜನೆಗೆ ಆದ್ಯತೆ ಮೇರೆಗೆ ರೈಲುಮಾರ್ಗ ಯೋಜನೆ ಪೂರ್ಣಗೊಳ್ಳಲು 6 ವರ್ಷಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಇದರಿಂದ ವಿಮಾನ ನಿಲ್ದಾಣಕ್ಕೆ ಬೆಂಗಳೂರು ನಗರದಿಂದ ಸುಲಭವಾಗಿ ಸಂಪರ್ಕ ಸಾಧ್ಯವಾಗುತ್ತದೆ.

148.17 ಕಿಲೋ ಮೀಟರ್ ಉದ್ದದ ರೈಲುಮಾರ್ಗ ಸಂಪರ್ಕದ ಈ ಯೋಜನೆಗೆ ರೈಲ್ವೆ ಸಚಿವಾಲಯ ಮತ್ತು ರಾಜ್ಯ ಸರ್ಕಾರದ ಮಧ್ಯೆ ಈ ಯೋಜನೆಯನ್ನು ಜಾರಿಗೊಳಿಸಲು ಕರ್ನಾಟಕ ರೈಲು ಮೂಲಭೂತಸೌಕರ್ಯ ಅಭಿವೃದ್ಧಿ ನಿಗಮ(ಕೆ-ಆರ್ ಐಡಿಇ) ಕೆಲಸ ಮಾಡುತ್ತಿದೆ. ಪಿಪಿಪಿ ಮಾದರಿಯಲ್ಲಿ ಬೋಗಿಗಳ ಸ್ಥಾಪನೆಗೆ 2 ಸಾವಿರದ 854 ಕೋಟಿ ರೂಪಾಯಿ ಸೇರಿ 18 ಸಾವಿರದ 621 ಕೋಟಿ ರೂಪಾಯಿಗಳನ್ನು ಆರಂಭದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ನಂತರ ಕಳೆದ ಫೆಬ್ರವರಿಯಲ್ಲಿ 3 ಸಾವಿರ ಕೋಟಿ ರೂಪಾಯಿಗಳಷ್ಟು ವೆಚ್ಚ ಕಡಿತ ಮಾಡಲಾಗಿದೆ. ಒಟ್ಟು 306 ಎಸಿ ಬೋಗಿಗಳನ್ನು ಈ ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು ಬೋಗಿಗಳನ್ನು 30 ವರ್ಷಗಳವರೆಗೆ ಖಾಸಗಿ ಸಹಭಾಗಿಗಳಿಗೆ ಲೀಸ್ ಗೆ ನೀಡಲಾಗುತ್ತದೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

15,767 ಕೋಟಿ ರೂಪಾಯಿ ಪ್ರಸ್ತಾವನೆಯಲ್ಲಿ ತೆರಿಗೆ, ಸುಂಕ, ಭೂ ವೆಚ್ಚ, ನಿರ್ಮಾಣ ಹಂತದಲ್ಲಿ ಬಡ್ಡಿವೆಚ್ಚ ಮತ್ತು ವೆಚ್ಚ ವರ್ಧನೆಯನ್ನು ಒಳಗೊಂಡಿರುತ್ತದೆ.

ಈ ಯೋಜನೆಗೆ 36 ವರ್ಷಗಳ ಹಿಂದೆಯೇ ಸಲಹೆ ನೀಡಲಾಗಿತ್ತು, ಆದರೆ ಜನರ ಒತ್ತಡ, ಬೇಡಿಕೆ ಹೆಚ್ಚಾದ ನಂತರ ಕಳೆದ ದಶಕದಿಂದೀಚೆಗಷ್ಟೇ ಇದರ ಜಾರಿಗೆ ಗಂಭೀರ ಚಿಂತನೆ ನಡೆಸಲಾಯಿತು. ಉಪನಗರ ರೈಲಿನ ಟಿಕೆಟ್ ವೆಚ್ಚ ಕನಿಷ್ಠ 13 ರೂಪಾಯಿಯಿಂದ ಗರಿಷ್ಠ 100 ರೂಪಾಯಿಗಳವರೆಗೆ ಇರುತ್ತದೆ.

SCROLL FOR NEXT