ರಾಜ್ಯ

ಬಸ್ ಪ್ರಯಾಣಿಕರ ಚಿನ್ನಾಭರಣ ಕಳವು ಮಾಡುತ್ತಿದ್ದ ಕಳ್ಳನ ಬಂಧನ; 10 ಲಕ್ಷ ರೂ. ಮೌಲ್ಯದ ಆಭರಣ ವಶ

Srinivasamurthy VN

ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಬಸ್ ಪ್ರಯಾಣಿಕರ ಚಿನ್ನಾಭರಣ ಕಳವು ಮಾಡುತ್ತಿದ್ದ ಕುಖ್ಯಾತ ಆರೋಪಿಯೊಬ್ಬನನ್ನು ಬಂಧಿಸಿರುವ ಉತ್ತರ ವಿಭಾಗದ ಆರ್ ಎಂ ಸಿಯಾರ್ಡ್ ಪೊಲೀಸರು ಬಂಧಿಸಿ 155 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಥಣಿಸಂದ್ರ ಮುಖ್ಯರಸ್ತೆ ನಿವಾಸಿ ಆದಿಲ್ ಪಾಷ ಅಲಿಯಾಸ್ ಆದಿಲ್ (26) ಬಂಧಿತ ಆರೋಪಿ. ಈತನಿಂದ 10 ಲಕ್ಷ ರೂ. ಮೌಲ್ಯದ 155 ಗ್ರಾಂ ತೂಕದ ಚಿನ್ನಾಭರಣ, 2 ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದೂರದಾರ ಮಹಿಳೆ ಮಾಲತಿ ಬಿ.ಪಿ. ಅವರು ಅ.8ರಂದು ಬೆಳಗ್ಗೆ 10.15ರ ಸುಮಾರಿಗೆ  ಬೆಂಗಳೂರಿನ ಮೆಜೆಸ್ಟಿಕ್ ನಿಂದ ಶಿವಮೊಗ್ಗಕ್ಕೆ ಹೋಗಲು ಕೆಎಸ್ ಆರ್ ಟಿಸಿ ಬಸ್ ಹತ್ತಿದ್ದಾರೆ. ಈ ಬಸ್ ಬೆಳಗ್ಗೆ 10.45ರ ಸುಮಾರಿಗೆ ಯಶವಂತಪುರ ಗೋವರ್ಧನ್ ಟಾಕೀಸ್ ಬಳಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಲ್ಲಿಸಿದಾಗ ಇಬ್ಬರು ಅಪರಿಚಿತ ಹೆಂಗಸರು ಒಂದು ಸಣ್ಣ ಮಗು ಮತ್ತು 7 ವರ್ಷದ ಹುಡುಗಿಯೊಂದಿಗೆ  ಅದೇ ಬಸ್ ಹತ್ತಿ ಮಾಲತಿ ಅವರು ಕುಳಿತಿರುವ ಆಸನದ ಹತ್ತಿರ ಬಂದು ಕುಳಿತುಕೊಂಡಿದ್ದಾರೆ. ಈ ವೇಳೆ ಚಿಲ್ಲರೆ ಹಣವನ್ನು ಮಾಲತಿ ಅವರ ಬ್ಯಾಗಿನ ಮೇಲೆ ಬೀಳಿಸಿ ಚಿಲ್ಲರೆ ಎತ್ತಿಕೊಳ್ಳುವ ನೆಪದಲ್ಲಿ ಮಾಲತಿ ಅವರ ಬ್ಯಾಗಿನಲ್ಲಿದ್ದ 155 ಗ್ರಾಂ ಚಿನ್ನಾಭರಣವನ್ನು ಕಳವು ಮಾಡಿದ್ದರು. ಈ ಬಗ್ಗೆ ಮಾಲತಿ ಅವರು ಆರ್  ಎಂಸಿ ಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಆದಿಲ್ ಪಾಷ, ಇಬ್ಬರು ಹೆಂಗಸರನ್ನು ಸಣ್ಣ ಮಕ್ಕಳ ಜೊತೆಯಲ್ಲಿ ಬಸ್ ಹತ್ತಿಸಿ ಒಂಟಿಯಾಗಿ ಕುಳಿತಿರುವ ಹೆಂಗಸರು ಪಕ್ಕದ ಸೀಟಿನಲ್ಲಿ ಕೂರಿಸಿ ಅವರ ಬ್ಯಾಗಿನ ಮೇಲೆ ಚಿಲ್ಲರೆ ಬೀಳಿಸಿ ಅದನ್ನು ತೆಗೆದುಕೊಳ್ಳುವ ನೆಪದಲ್ಲಿ ಆ ಹೆಂಗಸಿನ ಬ್ಯಾಗಿನಲ್ಲಿರುವ ಹಣ  ಮತ್ತು ಚಿನ್ನಾಭರಣಗಳನ್ನು ಕಳ್ಳತನ ಮಾಡಿ, ತಕ್ಷ಼ಣ ತನಗೆ ಕೊಡುತ್ತಿದ್ದು, ಅದನ್ನು ತೆಗೆದುಕೊಂಡು ಬಸ್ ಇಳಿದು ಬರುತ್ತಿದ್ದುದಾಗಿ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾನೆ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇಬ್ಬರು ಮಹಿಳಾ ಆರೋಪಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ. ಆರೋಪಿ ಆದಿಲ್ ಪಾಷನ  ಬಂಧನದಿಂದ ಆರ್ ಎಂಸಿಯಾರ್ಡ್ -1, ಸಾಮಾನ್ಯ ಕಳವು, ಎಚ್ ಎಎಲ್ ಪೊಲೀಸ್ ಠಾಣೆಯ 1, ಕೆಆರ್ ಪುರಂ 1, ದ್ವಿಚಕ್ರವಾಹನ ಕಳವು ಪ್ರಕರಣ ಬೆಳಕಿಗೆ ಬಂದಿವೆ.

ಆರೋಪಿಯು ಈ ಹಿಂದೆ ವೈಟ್ ಫೀಲ್ಡ್, ಕೊಡಿಗೇಹಳ್ಳಿ, ಮೈಕೋಲೇಔಟ್ ತಲಾ ಒಂದು, ಸೋಲದೇವನಹಳ್ಳಿ 2, ಬೆಳ್ಳಂದೂರು 1 ಹಗಲು ಕನ್ನಾ ಕಳವು ಪ್ರಕರಣ, ಮಾಲೂರು ಪೊಲೀಸ್ ಠಾಣೆಯ ಒಂದು ಸುಲಿಗೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದಾನೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಕನ್ನಾ ಕಳವು  ಪ್ರಕರಣದಲ್ಲಿ ಜೂ.22,2020ರಂದು ಜಾಮೀನಿನ ಮೇಲೆ ಹೊರಬಂದಿದ್ದಾನೆ. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿದೆ. ಯಶವಂತಪುರ ಉಪ ವಿಭಾಗದ ಎಸಿಪಿ ಎನ್.ಟಿ.ಶ್ರೀನಿವಾಸರೆಡ್ಡಿ ಮಾರ್ಗದರ್ಶನದಲ್ಲಿ ಆರ್ ಎಂಸಿ ಯಾರ್ಡ್ ಪೊಲೀಸ್ ಇನ್ಸ್ ಪೆಕ್ಟರ್ ಕೆ.ಎಚ್. ಮಹೇಂದ್ರ ಕುಮಾರ್, ಪಿಎಸ್ ಐ ಸಾರ್ಥಿಕ್,  ವೆಂಕಟೇಶ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

SCROLL FOR NEXT