ರಾಜ್ಯ

ವಿದ್ಯಾಗಮ ಯೋಜನೆ ಪರಿಪೂರ್ಣ-ಸುರಕ್ಷಿತ: ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ

Lingaraj Badiger

ಬೆಂಗಳೂರು: ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ನಾಲ್ವರು ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿದೆ ಎಂಬ ಕುರಿತಾದ ವರದಿಯೊಂದಿಗೆ ಶಾಲಾ ಮಕ್ಕಳಿಗೆ ಸುರಕ್ಷಿತ ಕ್ರಮಗಳೊಂದಿಗೆ ಕಲಿಕೆಯನ್ನು ಮುಂದುವರೆಸುವ ‘ವಿದ್ಯಾಗಮ’ಯೋಜನೆಯ ವೈಫಲ್ಯವೆಂಬಂತೆ ಬಿಂಬಿಸಿರುವುದು ವಿಷಾದನೀಯ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಶಾಲೆ ಮುಚ್ಚಿರುವ ಸಮಯದಲ್ಲಿಯೂ ಮಕ್ಕಳ ನಿರಂತರ ಕಲಿಕೆ, ಪ್ರತಿ ಮಗುವೂ ಕಲಿಕಾ ವ್ಯಾಪ್ತಿಯಲ್ಲಿ ಬರುವಂತಹ ಯೋಜನೆ ಇದಾಗಿದ್ದು, ವಿದ್ಯಾಗಮ ಯೋಜನೆ ಪರಿಪೂರ್ಣ-ಸುರಕ್ಷಿತವಾಗಿದೆ ಎಂದು ಸಚಿವರು ಹೇಳಿದ್ದಾರೆ.

ಶಿಕ್ಷಕರು-ಮಕ್ಕಳ ನಿರಂತರ ಸಂಪರ್ಕ, ಮಕ್ಕಳಲ್ಲಿ ಮಾರ್ಗದರ್ಶಿತ ಸ್ವಯಂ ಕಲಿಕೆ, ಶಿಕ್ಷಕರ ಮೂಲಕ ಮಕ್ಕಳ ಮನೋಸ್ಥೈರ್ಯದ ವೃದ್ಧಿ, ಶಾಲೆಯಿಂದ ಮಕ್ಕಳು ಹೊರಗುಳಿಯದಂತೆ ಖಾತ್ರಿ, ಶಿಕ್ಷಕರು, ಶಾಲಾ ಮೇಲುಸ್ತುವಾರಿ ಸಮಿತಿಯ ಸದಸ್ಯರು, ಆಡಳಿತ ಮಂಡಳಿಯವರು, ಸ್ವಯಂ ಸೇವಕರು, ಪೋಷಕರು ಹಾಗೂ ಸಮುದಾಯದ ಎಲ್ಲಾ ಭಾಗೀದಾರ ಸಕ್ರಿಯ ತೊಡಗಿಸುವಿಕೆಯಂತಹ ಸದುದ್ದೇಶಗಳೊಂದಿಗೆ ವಿದ್ಯಾಗಮ ಕಾರ್ಯಕ್ರಮವನ್ನು ಆರಂಭಿಸಲಾಗಿದೆ.

ಈ ಯೋಜನೆ ನಿರ್ವಹಿಸುವ ಎಲ್ಲ ಶಿಕ್ಷಕರು, ಮಕ್ಕಳನ್ನು ಕಲಿಕಾ ಚಟುವಟಿಕೆಗಳಲ್ಲಿ ಯಾವ ರೀತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಮಾಹಿತಿ, ತರಬೇತಿಯನ್ನು ಪಡೆದಿದ್ದಾರೆ ಎಂದು ಸುರೇಶ್ ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ರಾಜ್ಯಾದ್ಯಂತ ವಿವಿಧ ತರಗತಿಗಳ ಒಟ್ಟು 49.34 ಲಕ್ಷಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳು ‘ವಿದ್ಯಾಗಮ’ದ ಪ್ರಯೋಜನವನ್ನು ಪಡೆಯುತ್ತಿದ್ದು, 2 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ತಮಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಎಲ್ಲಿಯೂ ವಿದ್ಯಾರ್ಥಿಗಳಿಗೆ ವಿದ್ಯಾಗಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಕಾರಣಕ್ಕಾಗಿ ಕೋವಿಡ್ ಸೋಂಕು ತಗುಲಿರುವುದು ವರದಿಯಾಗಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಿಗೆ ಒಂದು ತಿಂಗಳ ಹಿಂದೆ ಕೋವಿಡ್ ಸೋಂಕು ತಗುಲಿದ್ದು, ಅವರು ಈಗ ಸೋಂಕಿನಿಂದ ಪೂರ್ಣ ಗುಣಮುಖರಾಗಿ ಆರೋಗ್ಯದಿಂದಿದ್ದಾರೆ. ಈ ಅವಧಿಯಲ್ಲಿ ಶಾಲೆಯ ಯಾವುದೇ ಶಿಕ್ಷಕರಿಗೆ ಯಾವುದೇ ರೀತಿಯ ಸೋಂಕು ತಗುಲಿರುವುದಿಲ್ಲ. ಸೆ. 22ರಂದು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ರ್ಯಾಂಡಮ್ ಆಗಿ ಸುಮಾರು 203 ವಿದ್ಯಾರ್ಥಿಗಳನ್ನು ತಪಾಸಣೆಗೊಳಪಡಿಸಿದಾಗ 4 ವಿದ್ಯಾರ್ಥಿಗಳಿಗೆ ಸೋಂಕು ಇರುವುದು ದೃಢಪಟ್ಟಿದೆ. ಈ ವಿದ್ಯಾರ್ಥಿಗಳು ಶಾಲಾವರಣದಲ್ಲಿ ಈ ಸೋಂಕು ತಗುಲಿಸಿಕೊಂಡಿರುವುದು ಸಾಧ್ಯವಿಲ್ಲ ಎಂಬ ಅಂಶಗಳನ್ನು ಸ್ಥಳೀಯ ಜಿಲ್ಲಾ ಉಪನಿರ್ದೇಶಕರು ದೃಢಪಡಿಸಿದ್ದಾರೆ. ಹಾಗಾಗಿ ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

SCROLL FOR NEXT