ಕೇಂದ್ರ ಸಚಿವ ಡಿ. ವಿ. ಸದಾನಂದಗೌಡ 
ರಾಜ್ಯ

ಜನೌಷಧಿಯಿಂದ ರಾಜ್ಯದ ಜನರಿಗೆ ಈ ವರ್ಷ 500 ಕೋಟಿ ರೂ. ಲಾಭ: ಡಿ.ವಿ. ಸದಾನಂದಗೌಡ

ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಯೋಜನೆಯಿಂದಾಗಿ ಕರ್ನಾಟಕ ರಾಜ್ಯವೊಂದರಲ್ಲೇ ಜನರಿಗೆ ಈ ವರ್ಷ ಕನಿಷ್ಠವೆಂದರೂ 500 ಕೋಟಿ ರೂಪಾಯಿ ಉಳಿತಾಯವಾಗುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡ ಅವರು ಹೇಳಿದ್ದಾರೆ.

ಬೆಂಗಳೂರು: ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಪೂರೈಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಯೋಜನೆಯಿಂದಾಗಿ ಕರ್ನಾಟಕ ರಾಜ್ಯವೊಂದರಲ್ಲೇ ಜನರಿಗೆ ಈ ವರ್ಷ ಕನಿಷ್ಠವೆಂದರೂ 500 ಕೋಟಿ ರೂಪಾಯಿ ಉಳಿತಾಯವಾಗುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡ ಅವರು ಹೇಳಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಪಿಎಂಬಿಜೆಪಿ ಯೋಜನೆಯಡಿ ಆರಂಭವಾಗಿರುವ ಜನೌಷಧಿ ಕೇಂದ್ರಗಳ ಕಾರ್ಯನಿರ್ವಹಣೆಯ ಪರಿಶೀಲನಾ ಸಭೆ ನಡೆಸಿದ ಸಚಿವರು ನಂತರ ಮಾಧ್ಯಮ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದರು. 

ಆರ್ಥಿಕ ದುರ್ಬಲರಿಗಾಗಿಯೇ ಆರಂಭಿಸಲಾಗಿರುವ ಜನೌಷಧಿಗಳು ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿವೆ. ರಾಜ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜನೌಷಧಿ ಮಾರಾಟ ಶೇಕಡಾ 73ರಷ್ಟು ವೃದ್ಧಿಯಾಗಿದೆ. ರಾಜ್ಯದಲ್ಲಿ 2020-21ರ ಹಣಕಾಸು ವರ್ಷದಲ್ಲಿ  125 ಕೋಟಿ ರೂ. ಮೌಲ್ಯದ ಜನೌಷಧಿ ಮಾರಾಟದ ಗುರಿ ಹೊಂದಲಾಗಿದ್ದು, ಕಳೆದ ಆರು ತಿಂಗಳಲ್ಲಿ ₹65 ಕೋಟಿ ವಹಿವಾಟು ನಡೆಸಲಾಗಿದೆ. ಕೊರೋನಾದಂತಹ ಸಂಕಷ್ಟದ ಸಮಯದಲ್ಲಿಯೂ ಜನೌಷಧಿ ಕೇಂದ್ರಗಳು ಗುರಿಮೀರಿ ವಹಿವಾಟು ನಡೆಸಿವೆ ಎಂದು ಅವರು ಹೇಳಿದರು.

ಖಾಸಗಿ ಔಷಧ ಅಂಗಡಿಗಳು ಮಾರಾಟ ಮಾಡುವ ಬ್ರಾಂಡೆಡ್‌ ಔಷಧಗಳ ಬೆಲೆಗೆ ಹೋಲಿಸಿದರೆ ನಮ್ಮಲ್ಲಿ ಸಿಗುವ ಅದೇ ಔಷಧಗಳ ಬೆಲೆ ಸರಾಸರಿ ನಾಲ್ಕರಿಂದ ಐದು ಪಟ್ಟು ಕಡಿಮೆ. ಕರ್ನಾಟಕದಲ್ಲಿ ವಾರ್ಷಿಕವಾಗಿ ಮಾರಾಟವಾಗುವ ಜನೌಷಧಿ ಮೌಲ್ಯ ಅಂದಾಜು 125 ಕೋಟಿ ರೂಪಾಯಿ. ನಮ್ಮ ಜನೌಷಧಿ ಅಂಗಡಿಗಳು ಇಲ್ಲವಾಗಿದ್ದರೆ ಜನರು ಸಂಪೂರ್ಣವಾಗಿ ಖಾಸಗಿ ಔಷಧಿ ಅಂಗಡಿಗಳ ಮೇಲೆ ಅವಲಂಬಿತವಾಗಿರಬೇಕಾಗುತ್ತಿತ್ತು ಎಂದರು.

ಜನೌಷಧ ಅಂಗಡಿಗಳಲ್ಲಿ ಔಷಧಗಳ ಬೆಲೆ ಕಡಿಮೆ ಎಂದಾಕ್ಷಣ ಗುಣಮಟ್ಟದಲ್ಲೇನೂ ಕಡಿಮೆಯಿಲ್ಲ. ಅಂತಾರಾಷ್ಟ್ರೀಯ ಮಾನದಂಡಕ್ಕನುಗುಣವಾಗಿ ಅವುಗಳ ಗುಣಮಟ್ಟವನ್ನು ಪರಿಶೀಲಿಸಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಕರ್ನಾಟಕದ ಮೊದಲ ಜನೌಷಧಿ ಕೇಂದ್ರವು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 2015ರ ನವೆಂಬರ್‌ 10ರಂದು ಆರಂಭವಾಗಿತ್ತು. ರಾಜ್ಯದಲ್ಲಿ ಇಂದು 705 ಜನೌಷಧಿ ಕೇಂದ್ರಗಳಿವೆ. ಪ್ರತಿವರ್ಷವೂ ನೂರಕ್ಕಿಂತ ಹೆಚ್ಚು ಹೊಸ ಕೇಂದ್ರಗಳನ್ನು ತೆರೆಯಲಾಗುತ್ತಿದೆ.ಜಿಲ್ಲಾ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಇರುವ ಎಲ್ಲ ಸರ್ಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳ ಬಳಿ ಜನೌಷಧಿ ಕೇಂದ್ರಗಳನ್ನು ತೆರೆಯಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

ಇದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಇಚ್ಛೆಯೂ ಹೌದು. ಪಿಎಂಬಿಜೆಪಿ ಯೋಜನೆಯ ಅನುಷ್ಠಾನಗೊಳಿಸುವ ಸಂಸ್ಥೆ ಬಿಪಿಪಿಐ (BPPI - Bureau of Pharma PSUs of India) ಕರ್ನಾಟಕ ಸರ್ಕಾರದೊಂದಿಗೆ 200 ಜನೌಷಧ ಕೇಂದ್ರಗಳನ್ನು ತೆರೆಯುವ ಬಗ್ಗೆ ಒಡಂಬಡಿಕೆ ಮಾಡಿಕೊಂಡಿದೆ. ಈ ಪೈಕಿ ಎಂ.ಎಸ್.ಐ.ಎಲ್‌. 85, ರೆಡ್ಕ್ರಾಸ್‌ ಸೊಸೈಟಿ ಮತ್ತಿತರರು 33 ಜನೌಷಧಿ ಕೇಂದ್ರಗಳನ್ನು ತೆರೆದಿದ್ದಾರೆ. ಇನ್ನುಳಿದ ಕೇಂದ್ರಗಳನ್ನೂ ತ್ವರಿತವಾಗಿ ಆರಂಭಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು.

ರಾಜ್ಯದ ಜನೌಷಧಿ ಕೇಂದ್ರಗಳಲ್ಲಿ ಗುಣಮಟ್ಟದ 825 ಬಗೆಯ ಔಷಧಗಳು 122 ನಮೂನೆ ಸರ್ಜಿಕಲ್ ಸಾಧನಗಳು ಲಭ್ಯವಿವೆ. ಕೇವಲ ಒಂದು ರೂಪಾಯಿಗೆ 'ಸುವಿಧಾ' ಹೆಸರಿನಲ್ಲಿ ಸ್ಯಾನಿಟರಿ ಪ್ಯಾಡ್ ಮಾರಾಲಾಗುತ್ತಿದೆ. ಬೇರೆ ಅಂಗಡಿಗಳಲ್ಲಿ ಬ್ರಾಂಡೆಡ್‌ ಸ್ಯಾನಿಟರಿ ಪ್ಯಾಡ್ ಬೆಲೆ  ರೂ 4ರಿಂದ 10 ರೂಪಾಯಿವರೆಗೂ ಇದೆ ಎಂದು ಅವರು ತಿಳಿಸಿದರು

ಜನೌಷಧಿ ಪರಿಶೀಲನಾ ಸಭೆಯಲ್ಲಿ ಸಚಿವರು ʼಸುವಿಧಾʼ ಸ್ಯಾನಿಟರಿ ಪ್ಯಾಡ್ ನ್ನು ಹೆಚ್ಚೆಚ್ಚು ಜನಪ್ರಿಯಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಹಾಗೆಯೇ ರಾಜ್ಯದಲ್ಲಿ ಈಗಿರುವ ಜನೌಷಧಿ ಕೇಂದ್ರಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಬೇಕು, ಜನೌಷಧಿಯ ಲಾಭ ಹೆಚ್ಚೆಚ್ಚು ಜನರಿಗೆ ತಲುಪಿಸಲು ತ್ವರಿತ ಪರಿಣಾಮಕಾರಿ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.

ಕೆಎಪಿಎಲ್‌ : ಹಾಗೆಯೇ, ಸಚಿವ ಸದಾನಂದ ಗೌಡ ಅವರು ತಮ್ಮ ಖಾತೆಯಡಿ ಕಾರ್ಯನಿರ್ವಹಿಸುವ ಸಾರ್ವಜನಿಕ ವಲಯದ ಉದ್ಯಮ ಕರ್ನಾಟಕ ಎಂಟಿಬಯೋಟಿಕ್ಸ್‌ ಮತ್ತು ಫಾರ್ಮಾಸ್ಯುಟಿಕಲ್ಸ್‌ ಲಿಮಿಟೆಡ್‌ನ (ಕೆಎಪಿಎಲ್) ಹಿರಿಯ ಅಧಿಕಾರಗಳ ಜತೆ ಕಂಪನಿಯ ಉತ್ಪಾದನೆ, ಮಾರಾಟ, ರಫ್ತು, ತಾಂತ್ರಿಕ ಉನ್ನತೀಕರಣ ಹಾಗೂ ಹಣಕಾಸು ಕ್ಷಮತೆಯ ಪರಿಶೀಲನೆ ನಡೆಸಿದರು.

ಬೆಂಗಳೂರಿನಲ್ಲಿರುವ ಕೆಎಪಿಎಲ್‌ ಆರಂಭವಾದಾಗಿನಿಂದಲೂ ಲಾಭದಲ್ಲಿದೆ. ಈ ವರ್ಷ 525 ಕೋಟಿ ರೂ ಮೌಲ್ಯದ ಔಷಧ ಉತ್ಪಾದನೆ ಹಾಗೂ 500 ಕೋಟಿ ರೂ. ಮಾರಾಟ ಗುರಿಯನ್ನು ನೀಡಲಾಗಿದೆ. ಕಳೆದ ಎರಡು ತ್ರೈಮಾಸಿಕದಲ್ಲಿ ಕಂಪನಿಯು 257 ಕೋಟಿ ರೂ ಮೌಲ್ಯದ ಔಷಧ ಮಾರಾಟ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಂಕಿತ ದಾಳಿಕೋರ 'ನರಕ ದೇಶ' ಆಫ್ಘಾನಿಸ್ತಾನದಿಂದ ಬಂದವನು, ಇದು ಭಯೋತ್ಪಾದಕ ಕೃತ್ಯ: ನ್ಯಾಷನಲ್ ಗಾರ್ಡ್ ಮೇಲೆ ದಾಳಿಗೆ Donald Trump ತೀವ್ರ ಖಂಡನೆ

ಇದು ಜೈಲಲ್ಲ, ಮದ್ಯದ ಫ್ಯಾಕ್ಟರಿ: ಕೈದಿಗಳಿಂದ ಮದ್ಯ ತಯಾರಿಕೆ? ಏನಾಗುತ್ತಿದೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ?

CM ಕುರ್ಚಿ ಕಸರತ್ತು: ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ, ರಾಹುಲ್-ಸೋನಿಯಾ ಜೊತೆ ಚರ್ಚಿಸಿ ಗೊಂದಲ ಬಗೆಹರಿಸುವೆ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ: ಸಿಎಂ ಆಪ್ತ ಗುಂಪಿನಿಂದ ಸ್ಪೋಟಕ ಸಂದೇಶ, ಡಾ. ಜಿ. ಪರಮೇಶ್ವರ್ ಹೇಳಿದ್ದೇನು?

ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ: ಸಿದ್ದುಗೆ ಪರೋಕ್ಷ ಟಾಂಗ್ ಕೊಟ್ಟರೇ ಡಿಕೆಶಿ..?

SCROLL FOR NEXT