ರಾಜ್ಯ

ಬೆಂಗಳೂರು ಗಲಭೆ ಪ್ರಕರಣ: ಸಿಸಿಬಿ ಚಾರ್ಜ್'ಶೀಟ್'ನಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಹೆಸರು ಉಲ್ಲೇಖ!

Manjula VN

ಬೆಂಗಳೂರು: ಕೆಜೆ ಹಳ್ಳಿ ಹಾಗೂ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮಧ್ಯಂತರ ಜಾರ್ಜ್ ಶೀಟ್ ಸಲ್ಲಿಸಿದ್ದು, ಜಾರ್ಜ್ ಶೀಟ್ ನಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಹೆಸರನ್ನು ಉಲ್ಲೇಖಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಆರೋಪ ಪಟ್ಟಿಯಲ್ಲಿ ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಹಿಂದೆ ಪುಲಿಕೇಶಿ ನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ವಿರುದ್ಧ ಸ್ಥಳೀಯ ಕಾಂಗ್ರೆಸ್ಸಿಗರ ರಾಜಕೀಯ ದ್ವೇಷ ಬಹುಮುಖ್ಯವಾಗಿದೆ ಎಂದು ಪ್ರಕರಣ ಸಂಬಂಧ ತನಿಖೆ ನಡೆಸಿದ ಕೇಂದ್ರ ಅಪರಾಧ ವಿಭಾಗ ತಿಳಿಸಿದೆ. 

ಗಲಭೆ ದಿನ ಶಾಸಕರ ಮನೆ ಮತ್ತು ಕಚೇರಿಗೆ ಬೆಂಕಿ ಹಾಕಿದ ಪ್ರಕರಣದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರಾದ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್, ಅವರ ಆಪ್ತ ಸಹಾಯಕ ಅರುಣ್, ಕಾರು ಚಾಲಕ ಸಂತೋಷ್, ಮಾಜಿ ಕಾರ್ಪೊರೇಟರ್ ಅಬ್ದುಲ್ ಜಾಕೀಬ್ ಜಾಕೀರ್ ಹಾಗೂ ಮಜ್ನು ಸೇರಿದಂತೆ ಸುಮಾರು 60 ಆರೋಪಿಗಳ ವಿರುದ್ಧ ಸಿಸಿಬಿ ದೋಷಾರೋಪ ಹೊರಿಸಿದೆ. ಶಾಸಕರ ಮನೆಗೆ ಬೆಂಕಿ ಹಾಕಲು ಉದ್ರಿಕ್ತರ ಗುಂಪನ್ನು ಈ ಕಾಂಗ್ರೆಸ್ ನಾಯಕರು ಪ್ರಚೋದಿಸಿದ್ದರು ಎಂದು ಉಲ್ಲೇಶಿಸಿದೆ ಎಂದು ವರದಿಗಳು ತಿಳಿಸಿವೆ. 

ವಿವಾದಿತ ಪೋಸ್ಟ್ ವೊಂದಕ್ಕೆ ಸಂಬಂಧಿಸಿದಂತೆ ಆಗಸ್ಟ್ 11 ರಂದು ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿಯಲ್ಲಿ ಗಲಭೆ ಸೃಷ್ಟಿಯಾಗಿತ್ತು. ಏಕಾಏಕಿ ಬಂದಿದ್ದ 300 ಮಂದಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ಅವರ ಸಹೋದರಿಯ ಮನೆಯ ಮೇಲೆ ದಾಳಿ ನಡೆಸಿದ್ದರು. ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿಯ ಮೇಲೂ ದಾಳಿ ನಡೆಸಿ ಧ್ವಂಸಗೊಳಿಸಿದ್ದರು. ಈವೇಳೆ ಸಾಕಷ್ಟು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯುಂಟಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ಈವರೆಗೂ 421 ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆ. 

ಪ್ರಕರಣ ಸಂಬಂಧ ಹೇಳಿಕೆ ನೀಡಿದ್ದ ಬಸವರಾಜ ಬೊಮ್ಮಾಯಿಯವರು, ಬಿಬಿಎಂಪಿ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ ಎದುರಾಗಿರುವ ಆಂತರಿಕ ಕಲಹಗಳು ಪುಲಕೇಶಿನಗರದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದೆ ಎಂದು ಹೇಳಿದ್ದರು. 

ಈ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ತಿರಸ್ಕರಿಸಿ, ತಮ್ಮ ಆಂತರಿ ವೈಫಲ್ಯವನ್ನು ಮುಚ್ಚಿಹಾಕಲು ಬಿಜೆಪಿ ಯತ್ನಿಸುತ್ತಿದೆ ಎಂದು ತಿಳಿಸಿದ್ದರು. 

SCROLL FOR NEXT