ರಾಜ್ಯ

ಡಿ.ಜೆ.ಹಳ್ಳಿ ಗಲಭೆ: ಕಾಂಗ್ರೆಸ್'ನ ಇಬ್ಬರು ಶಾಸಕರ ವಿಚಾರಣೆ ನಡೆಸಿದ ಎನ್ಐಎ

Manjula VN

ಬೆಂಗಳೂರು: ಡಿಜೆ ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ತನಿಖೆಯನ್ನು ತೀವ್ರಗೊಳಿಸಿರುವ ಎನ್‌ಐಎ ಅಧಿಕಾರಿಗಳು, ಕಾಂಗ್ರೆಸ್ ನ ಇಬ್ಬರು ಶಾಸಕರನ್ನು ವಿಚಾರಣೆ ನಡೆಸಿದ್ದಾರೆಂದು ತಿಳಿದುಬಂದಿದೆ. 

ಎನ್‌ಐಎ ಕಚೇರಿಗೆ ಕಾಂಗ್ರೆಸ್ ಶಾಸಕರಾದ ಜಮೀರ್ ಅಹಮ್ಮದ್, ರಿಜ್ವಾನ್ ಅರ್ಷದ್ ಅವರನ್ನು ಕರೆಸಿಕೊಂಡ ಅಧಿಕಾರಿಗಳು ನಿನ್ನೆ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಜಮೀರ್ ಅವರನ್ನು ಸೋಮವಾರ, ರಿಜ್ವಾನ್ ಅವರನ್ನು ಮಂಗಳವಾರ ವಿಚಾರಣೆ ನಡೆಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಬೆಂಗಳೂರು ಗಲಭೆ ಪ್ರಕರಣ ಸಂಬಂಧ ನಿನ್ನೆಯಷ್ಟೇ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದು, ಚಾರ್ಜ್ ಶೀಟ್ ನಲ್ಲಿ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದೆ ಎಂದು ತಿಳಿಸಿದೆ. 

ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಹಿಂದೆ ಪುಲಿಕೇಶಿ ನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ವಿರುದ್ಧ ಸ್ಥಳೀಯ ಕಾಂಗ್ರೆಸ್ಸಿಗರ ರಾಜಕೀಯ ದ್ವೇಷ ಬಹುಮುಖ್ಯವಾಗಿದೆ ಎಂದು ತಿಳಿಸಿರುವ ಸಿಸಿಬಿ, ಜಾರ್ಜ್ ಶೀಟ್ ನಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಅವರ ಹೆಸರನ್ನೂ ಉಲ್ಲೇಖಿಸಿದೆ ಎಂದು ವರದಿಗಳು ತಿಳಿಸಿವೆ. 

ವಿವಾದಿತ ಪೋಸ್ಟ್ ವೊಂದಕ್ಕೆ ಸಂಬಂಧಿಸಿದಂತೆ ಆಗಸ್ಟ್ 11 ರಂದು ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿಯಲ್ಲಿ ಗಲಭೆ ಸೃಷ್ಟಿಯಾಗಿತ್ತು. ಏಕಾಏಕಿ ಬಂದಿದ್ದ 300 ಮಂದಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ಅವರ ಸಹೋದರಿಯ ಮನೆಯ ಮೇಲೆ ದಾಳಿ ನಡೆಸಿದ್ದರು. ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿಯ ಮೇಲೂ ದಾಳಿ ನಡೆಸಿ ಧ್ವಂಸಗೊಳಿಸಿದ್ದರು. ಈವೇಳೆ ಸಾಕಷ್ಟು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯುಂಟಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ಈವರೆಗೂ 421 ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆ. 

SCROLL FOR NEXT