ರಾಜ್ಯ

ಕರ್ನಾಟಕದಲ್ಲಿ ಕೋವಿಡ್ ನಿರ್ವಹಣೆಗೆ ನೆರವು: ಪರಾಮರ್ಶೆ ನಡೆಸಲು ಕೇಂದ್ರದಿಂದ ತಜ್ಞರ ತಂಡ ಆಗಮನ

Sumana Upadhyaya

ಬೆಂಗಳೂರು, ನವದೆಹಲಿ: ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಂಕನ್ನು ರಾಜ್ಯ ಸರ್ಕಾರ ನಿಭಾಯಿಸುತ್ತಿರುವ ರೀತಿ ಬಗ್ಗೆ ಪರಾಮರ್ಶೆ ನಡೆಸಲು ತಜ್ಞರ ತಂಡವೊಂದನ್ನು ಕಳುಹಿಸಿದೆ.

ಸಾರ್ವಜನಿಕ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಮತ್ತು ಒಬ್ಬ ಕ್ಲಿನಿಶಿಯನ್ ನೇತೃತ್ವದ ತಂಡ ಕೇಂದ್ರದಿಂದ ರಾಜ್ಯಕ್ಕೆ ಭೇಟಿ ನೀಡಿದೆ. ತಂಡ ಇದುವರೆಗೆ ಕಲಬುರಗಿ ಮತ್ತು ಧಾರವಾಡಗಳಿಗೆ ಭೇಟಿ ನೀಡಿ ಪರಾಮರ್ಶೆ ನಡೆಸಿ ಇಂದು ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಲಿದೆ.

ಈ ಕುರಿತು ನಿನ್ನೆ ಹೇಳಿಕೆ ಬಿಡುಗಡೆ ಮಾಡಿದ್ದ ಕೇಂದ್ರ ಆರೋಗ್ಯ ಸಚಿವಾಲಯ, ಉನ್ನತ ಮಟ್ಟದ ತಂಡಗಳನ್ನು ಕೇರಳ, ಕರ್ನಾಟಕ, ರಾಜಸ್ತಾನ, ಛತ್ತೀಸ್ ಗಢ ಮತ್ತು ಪಶ್ಚಿಮ ಬಂಗಾಳಗಳಲ್ಲಿ ನಿಯೋಜಿಸಲಾಗಿದೆ. ಕಂಟೈನ್ ಮೆಂಟ್ ವಲಯಗಳನ್ನು ಬಲಪಡಿಸುವುದು, ವಿಚಕ್ಷಣೆ, ತಪಾಸಣೆ, ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳು, ದಕ್ಷತೆಯಿಂದ ಕ್ಲಿನಿಕಲ್ ನಿರ್ವಹಣೆ ಮಾಡುವುದಕ್ಕೆ ತಂಡ ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಲಿದೆ. ಕೋವಿಡ್ ಸೋಂಕನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಸಹ ಸಲಹೆ ನೀಡಲಿದೆ ಎಂದು ಹೇಳಿದೆ.

ತಂಡವು ಕರ್ನಾಟಕದ ಕೋವಿಡ್ -19 ನಿರ್ವಹಣೆಯ ಮಾದರಿಯನ್ನು ಪರಿಶೀಲಿಸುತ್ತದೆ ಮತ್ತು ಸಲಹೆಗಳನ್ನು ನೀಡುತ್ತದೆಯೇ ಹೊರತು ಯಾವುದೇ ಹಸ್ತಕ್ಷೇಪ ಅಥವಾ ಮೇಲ್ವಿಚಾರಣೆ ಮಾಡುವುದಿಲ್ಲ. ಕರ್ನಾಟಕದಲ್ಲಿ ಕಳೆದ ಬುಧವಾರಕ್ಕೆ ಒಟ್ಟು ಪ್ರಕರಣಗಳ ಸಂಖ್ಯೆ 7,43,848 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ರಾಜ್ಯವು ರಾಷ್ಟ್ರೀಯ ಸಂಖ್ಯೆಯಲ್ಲಿ 10.1% ನಷ್ಟಿದೆ.

"ಇದು ಪ್ರತಿ ಮಿಲಿಯನ್ ಜನಸಂಖ್ಯೆಗೆ 11,010 ಪ್ರಕರಣಗಳನ್ನು ಹೊಂದಿದೆ. ಇದುವರೆಗೆ ರಾಜ್ಯದಲ್ಲಿ 6,20,008 ರೋಗಿಗಳು ಚೇತರಿಸಿಕೊಂಡಿದ್ದಾರೆ, ಇದರ ಪರಿಣಾಮವಾಗಿ ಚೇತರಿಕೆ ಪ್ರಮಾಣ 83.35% ಆಗಿದೆ. ಸಕ್ರಿಯ ಪ್ರಕರಣಗಳು 1,13,557 (ರಾಷ್ಟ್ರಮಟ್ಟದ 14.1%). ರಾಜ್ಯದಲ್ಲಿ ಒಟ್ಟು 10,283 ಸಾವುಗಳು, 1.38% ನಷ್ಟು ಸಿಎಫ್ಆರ್ ಮತ್ತು ಪ್ರತಿ ಮಿಲಿಯನ್ ಜನಸಂಖ್ಯೆಗೆ 152 ಸಾವುಗಳು. ಟಿಪಿಎಂ 95,674 ಮತ್ತು ಸಕಾರಾತ್ಮಕತೆ ಪ್ರಮಾಣ 11.5%, ದಷ್ಟಿದೆ.

ಪರಿಷ್ಕೃತ ದರ: ಮಾದರಿ ಸಂಗ್ರಹಣೆ ಮತ್ತು ಸಾಗಣೆಗೆ ಸರ್ಕಾರಿ ಮತ್ತು ಖಾಸಗಿ ಲ್ಯಾಬ್ ಗಳಲ್ಲಿ 400 ರೂ, ಸರ್ಕಾರ ಉಲ್ಲೇಖಿಸಿದ ಖಾಸಗಿ ಲ್ಯಾಬ್ ಗಳಲ್ಲಿ ಕೋವಿಡ್ ಪರೀಕ್ಷೆಗೆ 800 ರೂ, ಖಾಸಗಿ ಲ್ಯಾಬ್ ಗಳಲ್ಲಿ 1,200 ರೂ, ಮನೆಗಳಲ್ಲಿ ಸಂಗ್ರಹಿಸಿದ ಸ್ಯಾಂಪಲ್ ಗಳಿಗೆ 1,600 ರೂ ನಿಗದಿಪಡಿಸಲಾಗಿದೆ.

SCROLL FOR NEXT