ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿ ಸೇರಿದಂತೆ ಮುಂಬೈ-ಕರ್ನಾಟಕದಲ್ಲಿ ಮಳೆ-ಪ್ರವಾಹ ಪರಿಸ್ಥಿತಿಯಿಂದಾಗಿ ಜನಜೀವನ ಅಸ್ತವಸ್ತಗೊಂಡಿದ್ದು, ಜಿಲ್ಲೆಯ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಪ್ರವಾಹ ಭೀತಿ ಶುರುವಾಗಿದೆ. ಕೃಷಿ ಇಲಾಖೆ ವ್ಯಾಪ್ತಿಯಲ್ಲಿ 35,238 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಅಂದಾಜು ₹ 315 ಕೋಟಿ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಭಾರೀ ಮಳೆಯಿಂದಾಗಿ ಸಂಭವಿಸಿದ ಅನಾಹುತದಲ್ಲಿ ಕಳೆದ 4 ದಿನಗಳ ಹಿಂದೆ ಹುಕ್ಕೇರಿಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಅಲ್ಲದೆ, 270ಕ್ಕೂ ಹೆಚ್ಚು ಮನೆಗಳೂ ಹಾನಿಗೊಳಗಾಗಿದೆ. ಇದರಲ್ಲಿ 60ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ನಾಶಗೊಂಡಿವೆ. ನೂರಾರು ಜಾನುವಾರುಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.
ಉಪ ಆಯುಕ್ತ ಎಂ,ಜಿ.ಹಿರೇಮಠ ಅವರು ಮಾತನಾಡಿ, ಕಿತ್ತೂರು, ಬೈಲಹೊಂಗಲ, ಚಿಕ್ಕೋಡಿ, ಗೋಕಾಕ್, ಖಾನಾಪುರ,ರಾಮದುರ್ಗ, ರಾಯಭಾಗ್ ತಾಲೂಕಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ ಎಂದು ಹೇಳಿದ್ದಾರೆ.
ಆಯಾ ತಾಲೂಕುಗಳಲ್ಲಿನ ಸರ್ಕಾರಿ ಅಧಿಕಾರಿಗಳು ಇದೀಗ ಮಳೆಯಿಂದಾಗಿ ಎದುರಾಗಿರುವ ನಷ್ಟವನ್ನು ಅಂದಾಜು ಮಾಡುವ ಕಾರ್ಯಗಳನ್ನು ಮಾಡುತ್ತಿದ್ದು, 35,000 ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶಗಳಲ್ಲಿ ಬೆಳೆಯಲಾಗಿದ್ದ ಕಬ್ಬು, ಸೋಯಾಬೀನ್ ಮತ್ತು ಹತ್ತಿ ಬೆಳೆಗಳು ಸಂಪೂರ್ಣವಾಗಿ ನಾಶಗೊಂಡಿವೆ. ಸಾಕಷ್ಟು ಹೊಲಗಳಲ್ಲಿ ಸಂಪೂರ್ಣವಾಗಿ ಬೆಳೆಯಲಾಗಿದ್ದ ಕಬ್ಬು ಮತ್ತು ಸೋಯಾಬೀನ್ ಕೂಡ ಸಂಪೂರ್ಣವಾಗಿ ನಾಶಗೊಂಡಿದ್ದು, ರೈತರು ಸ್ಥಿತಿಯಂತೂ ಹೇಳತೀರದಾಗಿದೆ.