ರಾಜ್ಯ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಜಪ್ತಿ ಮಾಡಿದ್ದ 2.5 ಕೆಜಿ ಚಿನ್ನ ನಾಪತ್ತೆ: ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ದೂರು

Manjula VN

ಬೆಂಗಳೂರು: ದೇಶಕ್ಕೆ ಚಿನ್ನ ಕಳ್ಳಸಾಗಣೆ ಮಾಡುವ ಹಲವು ಪ್ರಯತ್ನಗಳನ್ನು ವಿಫಲಗೊಳಿಸಿದ ವೇಳೆ ವಶಪಡಿಸಿಕೊಳ್ಳಲಾಗಿದ್ದ 2.5 ಕೆಜಿ ಚಿನ್ನ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಗೊ ವಿಭಾಗದ ಗೋದಾಮಿನಿಂದ ನಾಪತ್ತೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ಸಿಬಿಐ ಎಸಿಬಿ ಘಟಕದಲ್ಲಿ ದೂರು ದಾಖಲಾಗಿದೆ.

ಕಸ್ಟಮ್ಸ್ ಜಂಟಿ ಆಯುಕ್ತ ಎಂ.ಜೆ.ಚೇತನ್ ಅವರು ಏಳು ಜನರ ವಿರುದ್ಧ ಸಿಬಿಐಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ. 

ಅಕ್ರಮ ಚಿನ್ನ ಸಾಗಾಟ ಯತ್ನ ಸೇರಿ ಹಲವು ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ ಬರೋಬ್ಬರಿ 2.5 ಕೆಜಿ ಚಿನ್ನ ನಾಪತ್ತೆಯಾದ ಹಿನ್ನಲೆಯಲ್ಲಿ ದೂರು ದಾಖಲಿಸಲಾಗಿದೆ.

ಕೇಂದ್ರ ಹಣಕಾಸು ಸಚಿವಾಲಯದ ಸಹಾಯಕ ಆಯುಕ್ತ ವಿನೋದ್ ಚಿನ್ನಪ್ಪ ಮತ್ತು ಕೆ.ಕೇಶವ್, ಸೂಪರಿಟೆಂಡೆಂಟ್ ಎನ್.ಜೆ.ರವಿಶೇಖರ್, ಡೀನ್ ರೆಕ್ಸ್, ಕೆಬಿ ಲಿಂಗರಾಜು ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. 

2012ರಿಂದ 2014ರ ಅವಧಿಯಲ್ಲಿ ವಿವಿಧ ವ್ಯಕ್ತಿಗಳಿಂದ 13 ಪ್ರಕರಣದ ಅಡಿ 2.5 ಕೆಜಿ ಚಿನ್ನವನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ತದನಂತರ ಅದನ್ನು ವಿಮಾನ ನಿಲ್ದಾಣದ ಕಾರ್ಗೊ ವಿಭಾಗ ಗೋದಾಮಿನಲ್ಲಿಡಲಾಗಿತ್ತು. ಆದರೆ, ಗೋದಾಮಿನಲ್ಲಿಟ್ಟಿದ್ದ 2.5 ಕೆಜಿ ಚಿನ್ನ ನಾಪತ್ತೆಯಾಗಿದೆ. ಈ ಬಗ್ಗೆ ಇಲಾಖೆಯ ಹೈದರಾಬಾದ್ ನ ವಿಚಕ್ಷಣ ದಳ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. 

ಈ ವೇಳೆ ಆರೋಪಿಗಳ ಬಗ್ಗೆ ಸಂದೇಹ ವ್ಯಕ್ತವಾಗಿತ್ತು. ವಿಚಕ್ಷಣ ದಳ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಚೇತನ್ ಅವರು ಸಿಬಿಐಗೆ ದೂರು ನೀಡಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದ ಸಿಬಿಐ ಅಧಿಕಾರಿಗಳ ಅ.12ರಂದು ಎಫ್ಐಆರ್ ದಾಖಲಿಸಿದ್ದಾರೆ. 

SCROLL FOR NEXT