ರಾಜ್ಯ

ವಿಶ್ವವಿದ್ಯಾಲಯಗಳು, ಶಾಸಕರಿಂದ 1,414 ಸರ್ಕಾರಿ ಶಾಲೆಗಳ ದತ್ತು

Manjula VN

ಬೆಂಗಳೂರು: ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ಯೋಜನೆಯಡಿ ಈವರೆಗೆ 1,414 ಶಾಲೆಗಳನ್ನು ದತ್ತು ಪಡೆಯಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಆ ಬಗ್ಗೆ ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ.ಎಂ.ಆರ್‌. ದೊರೆಸ್ವಾಮಿಯವರು ಮಾಹಿತಿ ನೀಡಿದ್ದು, ಶಾಲೆಗಳ ದತ್ತು ಪಡೆದುಕೊಂಡು ಮೂಲಸೌಕರ್ಯ ಅಭಿವೃದ್ಧಿಪಡಿಸುವಂತೆ ಮಾಡಲಾಗಿದ್ದ ಮನವಿಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಈ ವರೆಗೂ ಒಟ್ಟು 1,414 ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲು ಮುಂದಕ್ಕೆ ಬಂದಿದ್ದಾರೆ. 

ಬಹುತೇಕ ಜನಪ್ರತಿನಿಧಿಗಳು, ಚಿತ್ರರಂಗದ ಗಣ್ಯರು, ವಿವಿಧ ಸರ್ಕಾರಿ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳು, ಐಟಿ ಬಿಟಿ ಕಂಪನಿಗಳು, ಸ್ವಾಯತ್ತ ಕಾಲೇಜುಗಳು, ಮಾಧ್ಯಮಗಳು, ದಾನಿಗಳು ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳ ಜನರು ಹಾಗೂ ಸಂಸ್ಥೆಗಳು ಒಟ್ಟಾರೆ 1414 ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲು ಮುಂದೆ ಬಂದಿದ್ದಾರೆ. 

ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ಸಂಬಂಧ ಸರ್ಕಾರಕ್ಕೆ ತಾವು ಮಾಡಿದ್ದ ಶಿಫಾರಸಿನ ಆಧಾರದ ಮೇಲೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಎಲ್ಲ ಶಾಸಕರು ತಮ್ಮ ಪ್ರದೇಶಾಭಿವೃದ್ಧಿ ಅನುದಾನದಡಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವುದಾಗಿ ಕಳೆದ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. 

ಬಳಿಕ ಸಂಸದರು, ರಾಜ್ಯಸಭಾ ಸದಸ್ಯರು, ವಿಧಾನಸಭೆ, ವಿಧಾನ ಪರಿಷತ್‌ ಸದಸ್ಯರು ಅತಿ ಉತ್ಸಾಹದಿಂದ ಶಾಲೆಗಳನ್ನು ದತ್ತು ಪಡೆಯಲು ಮುಂದಾಗಿದ್ದಾರೆ. ಜನಪ್ರತಿನಿಧಿಳೇ ಒಟ್ಟಾರೆಯಾಗಿ ಸುಮಾರು 1 ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ದತ್ತು ಪಡೆಯುವುದಾಗಿ ತಿಳಿಸಿದ್ದಾರೆ. ಈಗಾಗಲೇ ಎಂಎಲ್‌ಸಿಗಳು 213 ಶಾಲೆಗಳನ್ನ ಮತ್ತು 135 ಶಾಲೆಗಳನ್ನು ಸಂಸದರು ದತ್ತು ಪಡೆದುಕೊಂಡಿದ್ದಾರೆ. ಉಳಿದ ಕ್ಷೇತ್ರಗಳ ಜನರು ಕನಿಷ್ಠ 5ರಿಂದ 10 ಶಾಲೆಗಳನ್ನು ದತ್ತು ಪಡೆಯಲು ಸಿದ್ಧರಿದ್ದಾರೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ 10 ಶಾಲೆ, ಮೂವರು ಉಪಮುಖ್ಯಮಂತ್ರಿಗಳು ತಲಾ ಐದು ಶಾಲೆ, ಖಾಸಗಿ ಮತ್ತು ಸರ್ಕಾರಿ ಸೇರಿ 21 ವಿಶ್ವವಿದ್ಯಾಲಯಗಳು ತಲಾ 10 ಶಾಲೆಗಳನ್ನು ದತ್ತು ಪಡೆದುಕೊಂಡಿವೆ. ಬೆಂಗಳೂರಿನಲ್ಲಿ 200 ಸಾಫ್ಟ್‌ವೇರ್‌ ಕಂಪನಿಗಳು ತಲಾ 100 ಶಾಲೆಗಳನ್ನು ದತ್ತು ತೆಗೆದುಕೊಳ್ಳುವಂತೆ ಮನವಿ ಮಾಡಿಕೊಳ್ಳಲಾಗಿದೆ’ 

‘ದತ್ತು ಪಡೆಯಲು ಗುರುತಿಸಿರುವ ಶಾಲೆಗಳಲ್ಲಿ ಅಗತ್ಯ ಸಂಖ್ಯೆಯ ಶಿಕ್ಷಕರು, ಕೊಠಡಿಗಳು, ಗ್ರಂಥಾಲಯ, ಕಂಪ್ಯೂಟರ್‌, ಪೀಠೋಪಕರಣ, ಆವರಣಗೋಡೆ, ದುರಸ್ತಿ ಮತ್ತು ಪೇಂಟಿಂಗ್‌ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ’ ಎಂದು ಅವರು ಹೇಳಿದ್ದಾರೆ.

SCROLL FOR NEXT