ರಾಜ್ಯ

ಒಳ ಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್ ನ ವಿಸ್ತೃತ ಪೀಠದ ಆದೇಶಕ್ಕೆ ಕಾಯುತ್ತೇವೆ:ಗೋವಿಂದ ಎಂ.ಕಾರಜೋಳ

Sumana Upadhyaya

ಬೆಂಗಳೂರು: ಒಳ ಮೀಸಲಾತಿ ಬಗ್ಗೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಆದೇಶ ಮತ್ತು ಸದಾಶಿವ ಆಯೋಗ ವರದಿ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಸಂಡೆ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ್ದಾರೆ.

ಒಳ ಮೀಸಲಾತಿ ಬಗ್ಗೆ ರಾಜ್ಯಗಳ ಪ್ರತಿಕ್ರಿಯೆಯನ್ನು ಸುಪ್ರೀಂ ಕೋರ್ಟ್ ಕೇಳಿದೆ. ಸದಾಶಿವ ಆಯೋಗ ವರದಿ ಜಾರಿಗೆ ಸಂಬಂಧಪಟ್ಟಂತೆ ಇದರ ಬಗ್ಗೆ ನಿಮ್ಮ ಅನಿಸಿಕೆ ಏನು?
-ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದರೆ ಅದೇ ಅದೇಶದಲ್ಲಿ ಸುಪ್ರೀಂ ಕೋರ್ಟ್ ಅದನ್ನು ವಿಸ್ತೃತ ಪೀಠಕ್ಕೆ ಉಲ್ಲೇಖಿಸಿದೆ. ವಿಸ್ತೃತ ಪೀಠ ಏನು ಹೇಳುತ್ತದೆ ಎಂದು ನಾವು ಕಾಯುತ್ತಿದ್ದೇವೆ. ಇದೊಂದು ಸೂಕ್ಷ್ಮ ವಿಷಯ. ಸಂಪುಟ ಮುಂದೆ ಮಂಡಿಸುತ್ತೇವೆ. ಈ ಬಗ್ಗೆ ನಾನು ವೈಯಕ್ತಿಕವಾಗಿ ಏನೂ ಹೇಳುವುದಿಲ್ಲ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಇಡೀ ಸರ್ಕಾರ ಅಭಿಪ್ರಾಯ ನೀಡಿ ಸರ್ಕಾರದ ಮಟ್ಟದಲ್ಲಿ ತೆಗೆದುಕೊಳ್ಳುತ್ತದೆ.

ಪರಿಶಿಷ್ಟ ಜಾತಿಗಳ ನಾಯಕರ ಸಭೆಯನ್ನು ಮಾಜಿ ಕೇಂದ್ರ ಸಚಿವ ಕೆ ಎಚ್ ಮುನಿಯಪ್ಪ ಕರೆದಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ವಿಷಯ ಚರ್ಚಿಸಿ ಅಂಗೀಕರಿಸಬೇಕು ಎಂದಿದ್ದಾರೆ.ಕೇಂದ್ರ ಸರ್ಕಾರ ಜಾರಿಗೆ ತರಲು ಕೇಂದ್ರಕ್ಕೆ ರಾಜ್ಯ ಸರ್ಕಾರ ಒತ್ತಡ ಹೇರಬೇಕು ಎಂದಿದ್ದಾರೆ. ನಿಮ್ಮ ಅಭಿಪ್ರಾಯವೇನು?
-ನಾವಿದನ್ನು ಸಚಿವ ಸಂಪುಟದಲ್ಲಿ ವಿಸ್ತೃತವಾಗಿ ಚರ್ಚಿಸಿ ಕಾನೂನು ತಜ್ಞರ ಸಲಹೆ ಪಡೆದು ಮುಂದುವರಿಯುತ್ತೇವೆ. ಸುಪ್ರೀಂ ಕೋರ್ಟ್ 2004ರಲ್ಲಿ ತೀರ್ಮಾನ ಮಾಡಿದ ಈ ವಿಚಾರವನ್ನು ಆಂಧ್ರ ಪ್ರದೇಶ ಸರ್ಕಾರ ಹಲವು ಬಾರಿ ಎತ್ತಿತ್ತು. ಪಂಜಾಬ್ ನ ಕೆಲವರು ಸುಪ್ರೀಂ ಕೋರ್ಟ್ ಗೆ ಹೋದ ನಂತರ ಇಂದಿನ ಸ್ಥಿತಿ ನಿರ್ಮಾಣವಾಗಿದೆ.

ಸದಾಶಿವ ಆಯೋಗದ ವರದಿಯನ್ನು ಪ್ರಕಟಿಸಿಲ್ಲ, ಅದರ ಶಿಫಾರಸುಗಳೇನು ಎಂಬುದು ಯಾರಿಗೂ ಗೊತ್ತಿಲ್ಲ. 20 ವರ್ಷಗಳ ಹಿಂದೆ ಮಾಧ್ಯಮಗಳಲ್ಲಿ ಬಂದಿದ್ದೇ ಕೊನೆ. ಕೆಲವರು ವರದಿಯನ್ನು ಸಾರ್ವಜನಿಕವಾಗಿ ಮಂಡಿಸಿ ಚರ್ಚಿಸಬೇಕು ಎನ್ನುತ್ತಾರೆ. ಇದಕ್ಕೆ ನೀವು ಏನನ್ನುತ್ತೀರಿ. ಕೆಲವರು ಇದನ್ನು ಸದನದಲ್ಲಿ ಮಂಡಿಸಬೇಕು ಎನ್ನುತ್ತಾರೆ.
-ಸದಾಶಿವ ಆಯೋಗ ವರದಿಯನ್ನು ಇದುವರೆಗೆ ಪ್ರಕಟಿಸಿಲ್ಲ. ಹಿಂದಿನ ಸರ್ಕಾರಗಳು ಕೂಡ ಮಾಡಿಲ್ಲ. ಸಂಪುಟ ಮತ್ತು ಸರ್ಕಾರ ಮುಂದೆ ಮಂಡಿಸಿ ಮುಂದಿನದನ್ನು ತೀರ್ಮಾನಿಸುತ್ತೇವೆ.

ಮೀಸಲಾತಿ ಹಿಂದೆ ರಾಷ್ಟ್ರಪತಿಗಳ ಬಳಿಯಿತ್ತು, ಇಂದು ರಾಜ್ಯ ಸರ್ಕಾರಗಳ ಮುಂದೆ ತಂದು ಅದನ್ನು ರಾಜಕೀಯಗೊಳಿಸಲಾಗುತ್ತಿದೆ ಎಂದು ಅನಿಸುತ್ತಿದೆಯೇ?
-ಈ ವಿಷಯವನ್ನು ಖಂಡಿತಾ ರಾಜಕೀಯಗೊಳಿಸಬಾರದು, ಬೇರೆಯವರು ಏನು ಹೇಳುತ್ತಾರೆ ಎಂಬುದರಲ್ಲಿ ನನಗೆ ಆಸಕ್ತಿಯಿಲ್ಲ. ನಮ್ಮ ಸರ್ಕಾರ ಕೇಂದ್ರ ಮತ್ತು ರಾಜ್ಯದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತದೆ. ಆದೇಶದಲ್ಲಿ ಏನಿದೆ ಎಂದು ಅಧ್ಯಯನ ಮಾಡಿ ಅದನ್ನು ವಿಸ್ತೃತವಾಗಿ ಚರ್ಚಿಸುತ್ತೇವೆ.

ಪರಿಶಿಷ್ಟ ಜಾತಿಯಡಿ 101 ಜಾತಿಗಳಿವೆ. ಇಲ್ಲಿ ಎಲ್ಲಾ ಜಾತಿಗಳಿಗೂ ಸಮಾನ ಮೀಸಲಾತಿ ಸೌಲಭ್ಯ ಸಿಗಬೇಕು. ಕೆಲವರಿಗೆ ಹೆಚ್ಚು ಮೀಸಲಾತಿ ಪಾಲು ಸಿಗುತ್ತದೆ ಎಂಬ ಆರೋಪವಿದೆ. ನಿಮ್ಮ ಅಭಿಪ್ರಾಯವೇನು?
-ಮೂಲ ಮೀಸಲಾತಿ ಬಗ್ಗೆ ನೋಡಬೇಕು. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಪರಿಸ್ಥಿತಿಗಳಿಂದ ತುಳಿತಕ್ಕೊಳಗಾದವರ ಉದ್ಧಾರಕ್ಕೆ ಇದನ್ನು ಜಾರಿಗೆ ತರಲಾಯಿತು. ಸಂವಿಧಾನ ನಿಯಮಗಳನ್ನು ಈಡೇರಿಸಲು ಎಲ್ಲಾ 101 ಜಾತಿಗಳಿಗೆ ಶೇಕಡಾ 100ರಷ್ಟು ಮೀಸಲಾತಿ ಸೌಲಭ್ಯ ಸಿಗಬೇಕು.

ಇಷ್ಟು ವರ್ಷಗಳಿಂದ ಮೀಸಲಾತಿ ಸೌಲಭ್ಯ ಪಡೆದ ಕೆಲವು ಜಾತಿ ಮತ್ತು ಉಪ ಜಾತಿಗಳ ಬಗ್ಗೆ ಕೆಲವು ಅಂಕಿ ಅಂಶಗಳನ್ನು ನೀಡಬಹುದೇ?
-ಆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಅದನ್ನು ಪರೀಕ್ಷಿಸಿ ನಿಮಗೆ ಹೇಳುತ್ತೇನೆ. ಸ್ವಲ್ಪ ಸಮಯ ಕೊಡಿ. ಎಸ್.ಸಿಯಡಿ ಜಾತಿ ಮತ್ತು ಉಪ ಜಾತಿಗಳೆಂದು ಭಿನ್ನ ಮಾಡಿದರೆ ಮೂರನೇ ವ್ಯಕ್ತಿ ಲಾಭ ಪಡೆದುಕೊಳ್ಳುತ್ತಾರೆ ಎಂದು ಹಿರಿಯ ಸಂಸದರೊಬ್ಬರು ಹೇಳಿದ್ದಾರೆ. ಅವರು ಹೇಳಿದ್ದು ಇಲ್ಲಿ ಮುಖ್ಯವಲ್ಲ. ಎಲ್ಲಾ 101 ಜಾತಿಗಳಿಗೆ ಇಲ್ಲಿ ಲಾಭವಾಗಬೇಕು. ಕೆಲವರು ಹೆಚ್ಚು ಲಾಭ ಮಾಡಿಕೊಳ್ಳುತ್ತಿದ್ದಾರೆ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಸಿಗಬೇಕು.

SCROLL FOR NEXT