ಬೆಂಗಳೂರು: ಕೊರೋನಾ ಸಂಬಂಧಿತ ಸಮಸ್ಯೆಗಳ ಮಟ್ಟಹಾಕಲು ಅಂತರ್ ಜಿಲ್ಲೆಗಳ ಸಮನ್ವಯ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಹೇಳಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಕೋವಿಡ್ -19 ನಿಯಂತ್ರಣ ಹಾಗೂ ಪ್ರವಾಹಕ್ಕೆ ಸಂಬಂಧಿಸಿದಂತೆ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.
ಈ ವೇಳೆ ಜಿಲ್ಲಾಧಿಕಾರಿಗಳು ಕೋವಿಡ್ 19 ಪರೀಕ್ಷೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಪರೀಕ್ಷೆಗೆ ಅಗತ್ಯವಿರುವ ಕಿಟ್ ಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗುವುದು. ಅಗತ್ಯವಿರುವ ವೈದ್ಯರನ್ನು ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಪ್ರಯೋಗಾಲಯಗಳು ಕಡಿಮೆ ಇದ್ದಲ್ಲಿ ಪಕ್ಕದ ಜಿಲ್ಲೆಯಲ್ಲಿ ಮಾಡಿಸಲು ಕ್ರಮ ವಹಿಸಬೇಕು. ಬೂತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿಗಳು ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಬೇಕು. ಆಕ್ಸಿಜನ್ ಸಮಸ್ಯೆ ಇದ್ದರೆ ಹೆಚ್ಚು ಆಕ್ಸಿಜನ್ ಲಭ್ಯವಿರುವ ಜಿಲ್ಲೆಗಳಿಂದ ಪಡೆದುಕೊಳ್ಳಬೇಕು. ಮನೆ ಮನೆ ಸರ್ವೇ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಪ್ರಾಥಮಿಕ ಸಂಪರ್ಕವನ್ನು ಪತ್ತೆ ಹಚ್ಚಲು ಕ್ರಮ ವಹಿಸಬೇಕು. ಈಗಾಗಲೇ ಪಿ.ಜಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಕೌನ್ಸೆಲಿಂಗ್ ಮುಗಿದಿದ್ದು, ಇನ್ನೆರಡು ದಿನದಲ್ಲಿ 900 ಕ್ಕೂ ಹೆಚ್ಚು ತಜ್ಞ ವೈದ್ಯರನ್ನು ಜಿಲ್ಲೆಗಳಿಗೆ ನಿಯೋಜಿಸಲಾಗುವುದು. ರಾಜ್ಯದಲ್ಲಿ ಮರಣ ಪ್ರಮಾಣವನ್ನು ತಗ್ಗಿಸುವುದು ಆದ್ಯತೆಯಾಗಬೇಕು. ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ರೂ.20-30 ಕೋಟಿ ಹಣ ಇದೆ. ಹೀಗಾಗಿ ಹಣದ ಕೊರತೆಯಿಲ್ಲ. ವೆಂಟಿಲೇಟರ್, ಆಕ್ಸಿಜನ್ ಸಮಸ್ಯೆಯೂ ಸಹ ಇಲ್ಲ. ಆಕ್ಸಿಜನ್ ಕೊರತೆ ಉಂಟಾದರೆ ತಿಳಿಸುವಂತೆ ಸೂಚಿಸಲಾಗಿದೆ ಎಂದು ಸಿಎಂ ಹೇಳಿದರು.