ಬೆಂಗಳೂರು: ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸೇರಿದಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂಪುಟದ ನಾಲ್ವರು ಸಚಿವರು ಕೋವಿಡ್-19 ನಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದು, ಸೋಮವಾರದಿಂದ ಆರಂಭವಾಗಲಿರುವ ಅಧಿವೇಶನದಿಂದ ದೂರ ಉಳಿಯುವ ಸಾಧ್ಯತೆ ಇದೆ.
ಕೊರೋನಾ ಸೋಂಕು ತಗುಲಿರುವ ಬಗ್ಗೆ ಬುಧವಾರ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಘೋಷಿಸುವುದರೊಂದಿಗೆ ಕಳೆದ ಒಂದು ವಾರದೊಳಗೆ ನಾಲ್ಕು ಸಚಿವರಿಗೆ ಸೋಂಕು ತಗುಲಿದಂತಾಗಿದೆ. ಸೋಮವಾರ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರಿಗೆ ಪಾಸಿಟಿವ್ ಕಂಡುಬಂದಿತ್ತು. ಮಾರನೇ ದಿನ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಗೋಪಾಲಯ್ಯ ಅವರಿಗೆ ಕೊರೋನಾ ದೃಢಪಟ್ಟಿತ್ತು. ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಅವರಿಗೆ ಕಳೆದ ವಾರ ಕೊರೋನಾ ಸೋಂಕು ತಗುಲಿತ್ತು.
ಈ ನಾಲ್ವರು ಸದಸ್ಯರು ಕೆಲ ದಿನಗಳ ಮಟ್ಟಿಗೆ ಅಥವಾ ಈ ಅಧಿವೇಶನದಿಂದ ದೂರ ಉಳಿಯುವ ಸಾಧ್ಯತೆಯಿದೆ.ವೈದ್ಯಕೀಯ ನಿಗಾವಣೆಯಲ್ಲಿದ್ದು, ಚೇತರಿಸಿಕೊಳ್ಳುತ್ತಿದ್ದೇನೆ. ಪೂರ್ಣ ಗುಣಮುಖವಾಗಿ ,ಆಸ್ಪತ್ರೆಯಿಂದ ಡಿಸ್ಚಾರ್ಚ್ ಆದ ಬಳಿಕವೂ ಒಂದು ವಾರ ಐಸೋಲೇಷನ್ ನಲ್ಲಿ ಇರಬೇಕಾಗುತ್ತದೆ ಎಂದು ಗೋಪಾಲಯ್ಯ ಹೇಳಿದ್ದಾರೆ.
10 ದಿನಗಳ ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಕೊರೋನಾ ಕಾರಣದಿಂದಾಗಿ ಎಲ್ಲಾ ಸಚಿವರು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳಿಗೆ ಕೋವಿಡ್-19 ನೆಗೆಟಿವ್ ವರದಿಯನ್ನು ಕಡ್ಡಾಯಪಡಿಸಲಾಗಿದೆ.
ಕಳೆದ ಕೆಲ ತಿಂಗಳುಗಳಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಆರೋಗ್ಯ ಸಚಿವ ಬಿ. ಶ್ರೀರಾಮುಲು, ಕನ್ನಡ ಮ್ತು ಸಂಸ್ಕೃತಿ ಸಚಿವ ಸಿ. ಟಿ. ರವಿ. ಅರಣ್ಯ ಸಚಿವ ಆನಂದ್ ಸಿಂಗ್, ಸಹಕಾರ ಸಚಿವ ಎಸ್. ಟಿ. ಸೋಮಶೇಖರ್, ಕೃಷಿ ಸಚಿವ ಬಿ. ಸಿ. ಪಾಟೀಲ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಶಶಿಕಲಾ ಜೊಲ್ಲೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಕೊರೋನಾ ಸೋಂಕಿಗೆ ತುತ್ತಾಗಿ, ಈಗ ಚೇತರಿಸಿಕೊಂಡಿದ್ದಾರೆ.