ರಾಜ್ಯ

ಮಲಪ್ರಭಾ, ಘಟಪ್ರಭಾ ಒತ್ತುವರಿ ಸಮಗ್ರ ಸಮೀಕ್ಷೆ; ಒತ್ತುವರಿ ತಡೆಗೆ ಶಾಶ್ವತ ಯೋಜನೆ: ಸಚಿವ ರಮೇಶ್ ಜಾರಕಿಹೊಳಿ

Srinivasamurthy VN

ಬೆಳಗಾವಿ: ಮಲಪ್ರಭಾ, ಘಟಪ್ರಭಾ ನದಿತೀರದ ಒತ್ತುವರಿ ಪ್ರವಾಹಕ್ಕೆ ಕಾರಣವಾಗಿದೆ. ಆದ್ದರಿಂದ ನದಿತೀರದ ಒತ್ತುವರಿ ಕುರಿತು ಸಮಗ್ರ ಸಮೀಕ್ಷೆ ಕೈಗೊಂಡ ಬಳಿಕ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಈ ಸಮಸ್ಯೆಗಳ ನಿವಾರಣೆಗೆ ಶಾಶ್ವತ ಪರಿಹಾರ ಯೋಜನೆ ರೂಪಿಸಲಾಗುವುದು ಎಂದು ಜಲಸಂಪನ್ಮೂಲ ಹಾಗೂ  ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ಮಲಪ್ರಭಾ ಹಾಗೂ ಘಟಪ್ರಭಾ ನದಿಗಳ ಒತ್ತುವರಿ ಜಾಗದ ಸಮಸ್ಯೆಗಳ ಕುರಿತು ಸುವರ್ಣ ವಿಧಾನ ಸೌಧದಲ್ಲಿ ಶನಿವಾರ ನಡೆದ ಜಲಸಂಪನ್ಮೂಲ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಸಂಬಂಧಿಸಿದ ಜಿಲ್ಲಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ವೇಳೆ ವಿಧಾನಸಭೆ ಉಪ  ಸಭಾಪತಿ ಆನಂದ ಮಾಮನಿ, ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

'ನದಿ ಪಾತ್ರದ ತೆರವು ಕುರಿತು ಮಹತ್ವದ ಮೊದಲ ಸಭೆ ಇಂದು ಆಯೋಜಿಸಲಾಗಿದೆ. ಪ್ರಮುಖವಾಗಿ ಮಲಪ್ರಭಾ, ಘಟಪ್ರಭಾ, ಬಳ್ಳಾರಿ ನಾಲಾ, ಹಿರಣ್ಯಕೇಶಿ ನದಿಪಾತ್ರದ ಒತ್ತುವರಿ ಬಗ್ಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಸಮೀಕ್ಷೆ ನಡೆಸಲಾಗುವುದು. ಈ ಮೊದಲು ಪ್ರವಾಹ ಬಂದಾಗ ಮೂರೇ  ತಾಸಿನಲ್ಲಿ ನೀರು ಇಳಿಮುಖವಾಗಿದೆ. ಜಲಾಶಯಗಳಲ್ಲಿ ಹೂಳು ತುಂಬಲು ಹಾಗೂ ನೀರು ಸಂಗ್ರಹ ಪ್ರಮಾಣ ಕಡಿಮೆಗೆ ಒತ್ತುವರಿಯೇ ಕಾರಣ ಎಂದು ತಿಳಿದುಬಂದಿದೆ. ಈ ಬಗ್ಗೆ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಅಂತೆಯೇ ಸಮೀಕ್ಷೆ ಬಳಿಕ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸೂಕ್ತ ಯೋಜನೆ ರೂಪಿಸಲಾಗುವುದು. ಅಗತ್ಯತೆ ಆಧರಿಸಿ ಸಮೀಕ್ಷೆ ಬಳಿಕ ಕೇಂದ್ರ ಸರ್ಕಾರದ ನೆರವು ಪಡೆಯುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಸಭೆಯ ವರದಿ ಆಧರಿಸಿ ಈಗಾಗಲೇ ಬೆಳಗಾವಿ ಪ್ರಾದೇಶಿಕ ಆಯುಕ್ತರು ಪ್ರಾಥಮಿಕ ಸಮೀಕ್ಷೆ   ನಡೆಸಿದ್ದಾರೆ. ಸಮಗ್ರ ಸಮೀಕ್ಷೆ ಬಳಿಕ ಮತ್ತೊಮ್ಮೆ ಸಭೆ ನಡೆಸಿ ಶಾಶ್ವತ ಪರಿಹಾರ ರೂಪಿಸಲಾಗುವುದು. ನದಿಪಾತ್ರದ ಅತಿಕ್ರಮಣ ಆಗಿರುವುದು ಸತ್ಯ. ಒತ್ತುವರಿ ತೆರವುಗೊಳಿಸಿದರೆ ಪ್ರವಾಹ ನಿಯಂತ್ರಣ ಸಾಧ್ಯ. ಕಳಸಾ-ಬಂಡೂರಿ ಯೋಜನೆ ಕುರಿತು ಸಿಎಂ ಕೂಡ ಚರ್ಚೆ ನಡೆಸಿದ್ದಾರೆ ಎಂದು ಹೇಳಿದರು.

ಇನ್ನು ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ರಮೇಶ್ ಜಾರಕಿಹೊಳಿ ಅವರು ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ನಿರ್ಧರಿಸಲಿದೆ ಎಂದು ತಿಳಿಸಿದರು.

SCROLL FOR NEXT