ರಾಜ್ಯ

ನಗರದೊಳಗಿನ ಎಲ್ಲಾ ಅನಧಿಕೃತ ಹೊರಾಂಗಣ ಜಾಹಿರಾತುಗಳನ್ನು ತೆರವುಗೊಳಿಸಿ: ಅಧಿಕಾರಿಗಳಿಗೆ ಬಿಬಿಎಂಪಿ ಸೂಚನೆ

Manjula VN

ಬೆಂಗಳೂರು: ನಗರದೊಳಗಿರುವ ಎಲ್ಲಾ ಅನಧಿಕೃತ ಹೊರಾಂಗಣ ಜಾಹಿರಾತುಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಶನಿವಾರ ಸೂಚನೆ ನೀಡಿದೆ. 

ಶನಿವಾರ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಹಾಗೂ ಆಯುಕ್ತ ಮಂಜುನಾಥ ಪ್ರಸಾದ್ ಅವರು ಜಂಟಿಯಾಗಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. 

ಈ ವೇಳೆ ಮಾತನಾಡಿದ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಹಾಗೂ ಆಯುಕ್ತ ಮಂಜುನಾಥ್ ಪ್ರಸಾದ್ ಅವರು, ನಗರದೊಳಗಿರುವ ಎಲ್ಲಾ ಅನಧಿಕೃತ ಹೋರ್ಡಿಂಗ್ಸ್ ಗಳನ್ನು ತೆಗೆದುಹಾಕುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ, ಅಂತಹ ಜಾಹೀರಾತುಗಳನ್ನು ಹಾಕಲು ಅನುಮತಿ ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆಂದು ತಿಳಿದುಬಂದಿದೆ. 

ಗೌರವ್ ಗುಪ್ತಾ ಅವರು ಮಾತನಾಡಿ, ನಗರದ ಪ್ರಮುಖ ಜಂಕ್ಷನ್ ಗಳನ್ನು ಅಭಿವೃದ್ಧಿ ಪಡಿಸಲು ಗಮನ ಹರಿಸಬೇಕು. ಜೊತೆಗೆ ಮುಖ್ಯ ರಸ್ತೆಗಳ ಸ್ವಚ್ಛತೆಗೆ ನಿಯೋಜಿಸಿರುವ ಯಾಂತ್ರಿಕ ಕಸ ಗುಡಿಸುವ ಯಂತ್ರಗಳನ್ನು ಸಮಪರ್ಕವಾಗಿ ಬಳಸಿಕೊಳ್ಳುವಂತೆ ತಿಳಿಸಿದ್ದಾರೆ. 

ಆನೇಪಾಳ್ಯ ಜಂಕ್ಷನ್ ರಸ್ತೆ ಅಗಲೀಕರಣ ಕಾಮಗಾರಿಯನ್ನು ಆಯುಕ್ತರು ಹಾಗೂ ಆಡಳಿತಾಧಿಕಾರಿಗಳು ಇದೇ ವೇಳೆ ಪರಿಶೀಲನೆ ನಡೆಸಿದರು. ಈ ವೇಳೆ ಸುಮಾರು 800 ಮೀಟರ್ ಉದ್ಧದ ರಸ್ತೆ ಅಗಲೀಕರಣ ಪ್ರಸ್ತಾವನೆ ಇದೆ. ಅದಕ್ಕಾಗಿ 19 ಆಸ್ತಿಗಳನ್ನು ವಶಕ್ಕೆ ಪಡೆಯಬೇಕಾಗಿದ್ದು, ಯೋಜನಾ ವಿಭಾಗದ ವಿಶೇಷ ಆಯುಕ್ತರ ಅಧ್ಯಕ್ಷತೆಯಲ್ಲಿ ದರ ಸಂಧಾನ ಸಮಿತಿ ಸಭೆ ನಡೆಸಿ ಆಸ್ತಿ ಮಾಲೀಕರಿಗೆ ಅಭಿವೃದ್ಧಿ ಹಕ್ಕು ವರ್ಗಾವಣೆ ಪತ್ರ ಹಂಚಿಕೆ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಸ್ತೆಯ ಮೂಲಕ ಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ವಿವರಿಸಿದರು. 

ಹೆಚ್ಎಸ್ಆರ್ ಬಡಾವಣೆ ವಾರ್ಡ್'ನ ಸಿಲ್ಕ್ ಬೋರ್ಡ್ ರಸ್ತೆಯ ಸರ್ವೀಸ್ ರಸ್ತೆಯನ್ನು ಕೂಡಲೇ ದುರಸ್ತಿಪಡಿಸಿ ವಾರದೊಳಗಾಗಿ ಡಾಂಬರೀಕರಣ ಮಾಡುವಂತೆ ಆಯುಕ್ತರು ಇದೇ ವೇಳೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

SCROLL FOR NEXT