ರಾಜ್ಯ

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಬಿಬಿಎಂಪಿಗೆ ನೋಡಲ್ ಅಧಿಕಾರಿಗಳ ನೇಮಕ

Shilpa D

ಬೆಂಗಳೂರು: ಕಾರ್ಪೊರೇಟರ್‌ಗಳ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಅಗತ್ಯ ಸೇವೆಗಳನ್ನು ಒದಗಿಸಲು ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ವಾರ್ಡ್‌ವಾರು ಸಮಿತಿಗಳನ್ನು ರಚಿಸಿ, ನೋಡಲ್‌
ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ.

198 ನೋಡಲ್ ಅಧಿಕಾರಿಗಳ ಹೆಸರು ಮತ್ತು ಅವರ ಕಾಂಟ್ಯಾಕ್ಟ್ ನಂಬರ್ ಗಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದಾರೆ. ಚುನಾಯಿತ ಸದಸ್ಯರ ಅಧಿಕಾರಾವಧಿಯು ಸೆ.10ಕ್ಕೆ ಮುಕ್ತಾಯವಾಗಿದೆ. ಇದರಿಂದ ಪಾಲಿಕೆ ಮತ್ತು ಸಾರ್ವಜನಿಕರ ನಡುವೆ ಸಮನ್ವಯ ಸಾಧಿಸಲು ಕಷ್ಟಕರವಾಗಿದೆ. ಹೀಗಾಗಿ, ಪ್ರತಿ ವಾರ್ಡ್‌ಗೆ ನೋಡಲ್‌ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 

ವಾರ್ಡ್‌ ವ್ಯಾಪ್ತಿ ಮತ್ತು ಸಮೀಪದಲ್ಲೇ ವಾಸವಿರುವ ಅಧಿಕಾರಿಗಳನ್ನು ನೇಮಕ ಮಾಡಿ ಆಯುಕ್ತ ಎನ್‌.ಮಂಜುನಾಥ
ಪ್ರಸಾದ್‌ ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕರ ಕುಂದು-ಕೊರತೆಗಳ ನಿವಾರಣೆಗಾಗಿ ವಾರ್ಡ್‌ನ ನೋಡಲ್‌ ಅಧಿಕಾರಿ ಅಧ್ಯಕ್ಷತೆಯಲ್ಲಿಸಮಿತಿಗಳನ್ನು ರಚಿಸಲಾಗಿದೆ. ಆಯಾ ವಾರ್ಡ್‌ನ ಸಹಾಯಕ, ಕಿರಿಯ ಎಂಜಿನಿಯರ್‌ ಸದಸ್ಯ ಕಾರ್ಯದರ್ಶಿಯಾಗಿದ್ದು, ಹಿರಿಯ ಅಥವಾ ಕಿರಿಯ ಆರೋಗ್ಯ ಪರಿವೀಕ್ಷಕರು ಹಾಗೂ ಸ್ಥಳೀಯ ನಾಗರಿಕ ಕಲ್ಯಾಣ ಸಂಘದ ಪದಾಧಿಕಾರಿಗಳು ಸದಸ್ಯರಾಗಿರುತ್ತಾರೆ.

ಈ ಸಮಿತಿಯು ಪ್ರತಿ ತಿಂಗಳು ಒಂದನೇ ಮತ್ತು ಮೂರನೇ ಶನಿವಾರ ಸಭೆ ಸೇರಿ ವಾರ್ಡ್‌ನ ಸಮಸ್ಯೆಗಳ ಕುರಿತು ಚರ್ಚಿಸಿ, ನಡವಳಿಗಳನ್ನು ವಲಯ ವಿಶೇಷ ಆಯುಕ್ತರ ಮೂಲಕ ಆಯುಕ್ತರಿಗೆ ಸಲ್ಲಿಸಲಿದ್ದಾರೆ.

ಸಮರ್ಪಕ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು, ಮನೆಗಳು ಮತ್ತು ವಾಣಿಜ್ಯ ಸಂಕೀರ್ಣಗಳು ಹಸಿ, ಒಣ ಮತ್ತು ನೈರ್ಮಲ್ಯ ತ್ಯಾಜ್ಯ ನೀಡುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕು.

ಕಸ ವಿಂಗಡಿಸಿಕೊಡದ ಮನೆಗಳು, ವಾಣಿಜ್ಯ ಮಳಿಗೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಬೇಕು. ಆ ಬಳಿಕವೂ ವಿಂಗಡಿಸಿಕೊಡದಿದ್ದರೆ ದಂಡ ವಿಧಿಸಲು ಕ್ರಮ ವಹಿಸಬೇಕು. ಕಸ ಸಂಗ್ರಹಿಸಲು ಅಗತ್ಯ ಪೌರ ಕಾರ್ಮಿಕರು, ತಳ್ಳುವ ಗಾಡಿ ಮತ್ತು ಆಟೊ ಟಿಪ್ಪರ್‌ಗಳನ್ನು ಗುತ್ತಿಗೆದಾರರು ಒದಗಿಸಿರುವ ಬಗ್ಗೆ ಪರಿಶೀಲಿಸಬೇಕು.

ಗುತ್ತಿಗೆದಾರರು ಪೌರ ಕಾರ್ಮಿಕರಿಗೆ ಪ್ರತಿ ತಿಂಗಳು ಕನಿಷ್ಠ ವೇತನವನ್ನು ಚೆಕ್‌ ಮೂಲಕ ಪಾವತಿಸಿರುವ ಬಗ್ಗೆ ಬ್ಯಾಂಕ್‌ನಿಂದ ವಿವರ ತರಿಸಿಕೊಂಡು ಪರಿಶೀಲಿಸಬೇಕು. ಇಎಸ್‌ಐ, ಪಿಎಫ್‌, ವಿಡಿಎ ಮತ್ತು ಇನ್ನಿತರೆ ಗೌರವ ಧನವನ್ನು ಬ್ಯಾಂಕ್‌ಗೆ ಜಮೆ ಮಾಡಿರುವ ಕುರಿತು, ಗುಣಮಟ್ಟದ ಸುರಕ್ಷತಾ ಸಾಧನಗಳನ್ನು ಧರಿಸಿಕೊಂಡು ಕೆಲಸ ನಿರ್ವಹಿಸುತ್ತಿರುವುದನ್ನು ಪರಿಶೀಲನೆ ನಡೆಸಬೇಕು.
 

SCROLL FOR NEXT